ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕಾಲುಗಳ ಕಳೆದುಕೊಂಡ ಮಹಿಳೆ: ರೂ.25 ಲಕ್ಷ ಪರಿಹಾರ ನೀಡುವಂತೆ ಆಸ್ಪತ್ರೆಗೆ ಗ್ರಾಹಕ ಆಯೋಗ ಸೂಚನೆ

ಸಿಬ್ಬಂದಿಗಳು ಮಾಡಿದ ನಿರ್ಲಕ್ಷ್ಯಕ್ಕೆ 28 ವರ್ಷದ ಮಹಿಳೆಯೊಬ್ಬರು ಶಾಶ್ವತ ಅಂಗವೈಕಲ್ಯಕ್ಕೊಳಗಾಗಿದ್ದು, ಇದಕ್ಕೆ ಕಾರಣವಾದ ಬೆಂಗಳೂರಿನ ತಮಾರಾ ಆಸ್ಪತ್ರೆ ಮತ್ತು ಐವಿಎಫ್ ಕೇಂದ್ರ ಮಹಿಳೆಗೆ ರೂ.25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಆಯೋಗ ಸೂಚನೆ ನೀಡಿದೆ.
ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕಾಲುಗಳ ಕಳೆದುಕೊಂಡ ಮಹಿಳೆ: ರೂ.25 ಲಕ್ಷ ಪರಿಹಾರ ನೀಡುವಂತೆ ಆಸ್ಪತ್ರೆಗೆ ಗ್ರಾಹಕ ಆಯೋಗ ಸೂಚನೆ

ಬೆಂಗಳೂರು: ಸಿಬ್ಬಂದಿಗಳು ಮಾಡಿದ ನಿರ್ಲಕ್ಷ್ಯಕ್ಕೆ 28 ವರ್ಷದ ಮಹಿಳೆಯೊಬ್ಬರು ಶಾಶ್ವತ ಅಂಗವೈಕಲ್ಯಕ್ಕೊಳಗಾಗಿದ್ದು, ಇದಕ್ಕೆ ಕಾರಣವಾದ ಬೆಂಗಳೂರಿನ ತಮಾರಾ ಆಸ್ಪತ್ರೆ ಮತ್ತು ಐವಿಎಫ್ ಕೇಂದ್ರ ಮಹಿಳೆಗೆ ರೂ.25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಆಯೋಗ ಸೂಚನೆ ನೀಡಿದೆ. 

ಮಹಿಳೆಗೆ ಶೇ.10 ಬಡ್ಡಿಯೊಂದಿಗೆ ರೂ 2,47,288 ವೈದ್ಯಕೀಯ ವೆಚ್ಚಗಳು ಮತ್ತು ರೂ 50,000 ವ್ಯಾಜ್ಯ ವೆಚ್ಚ ನೀಡುವಂತೆ ಗ್ರಾಹಕ ಆಯೋಗ ಆಸ್ಪತ್ರೆಗೆ ಸೂಚನೆ ನೀಡಿದೆ. 

ಶ್ರೀರಾಂಪುರದ ನಿವಾಸಿಯಾಗಿರುವ ಮಹಿಳೆ 2020 ಮಾರ್ಚ್ ತಿಂಗಳಿನಲ್ಲಿ ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ನಂತರ ಮಹಿಳೆಗೆ ಅತೀವ್ರ ಚಳಿಯುಂಟಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ನರ್ಸ್ ಆಕೆಯ ಕಾಲುಗಳ ಕೆಳಗೆ ಎರಡು ಹಾಟ್ ಬ್ಯಾಗ್ ಗಳನ್ನು ಇರಿಸಿ, ಕುತ್ತಿಗೆ ವರೆಗೆ ಕಂಬಳಿ ಮುಚ್ಚಿ ಹೋಗಿದ್ದಾರೆ. ಆದರೆ, ಈ ಬಗ್ಗೆ ಮಹಿಳೆ ಹಾಗೂ ಮಗುವನ್ನು ನೋಡಿಕೊಳ್ಳುತ್ತಿದ್ದ ಕುಟುಂಬಸ್ಥರಿಗೆ ಮಾಹಿತಿ ನೀಡಿಲ್ಲ. 

ಅತೀವ್ರ ಬಿಸಿ ನೀರು ಹಿನ್ನೆಲೆಯಲ್ಲಿ ಹಾಟ್ ವಾಟರ್ ಬ್ಯಾಗ್ ಒಡೆದು ನೀರು ಹೊರಗೆ ಬಂದಿದೆ. ಆದರೆ, ಅರವಳಿಕೆ ಪಡೆದುಕೊಂಡಿದ್ದ ಮಹಿಳೆಗೆ ಸಂವೇದನೆ, ನೋವಿನ ಅನುಭವವಾಗಿಲ್ಲ. ಸಂಜೆ 4 ಗಂಟೆ ವೇಳೆ ಅರವಳಿಕೆ ಪರಿಣಾಮ ಇಳಿಕೆಯಾಗುತ್ತಿದ್ದಂತೆಯೇ ಕಾಲಿನಲ್ಲಿ ಅತೀವ್ರ ಉರಿ ಕಾಣಿಸಿಕೊಂಡಿದೆ. ಈ ವೇಳೆ ಕುಟುಂಬಸ್ಥರು ಕಂಬಳಿ ತೆಗೆದು ನೋಡಿದಾಗ ಕಾಲುಗಳು ಸಂಪೂರ್ಣವಾಗಿ ಸುಟ್ಟುಹೋಗಿರುವುದು ಕಂಡು ಬಂದಿದೆ. ಮಹಿಳೆಗೆ ಇದೀಗ ನಿಲ್ಲಲು, ನಡೆಯಲು ಸಾಧ್ಯವಾಗುತ್ತಿಲ್ಲ. ಇದೀಗ ಮಹಿಳೆ ಸಂಪೂರ್ಣ ಅಂಗವೈಕಲ್ಯಕ್ಕೊಳಗಾಗಿದ್ದಾರೆ. 

ಕುಟುಂಬಸ್ಥರು ಈಗಾಗಲೇ ಕೇರಳದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ, ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ವೆಚ್ಚ ಸಂಬಂಧ ಕುಟುಂಬಸ್ಥರು ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ. ಆದರೆ, ಆಸ್ಪತ್ರೆಯವರು ಕೇವಲ ರೂ.50,000 ನೀಡುವುದಾಗಿ ತಿಳಿಸಿದ್ದಾರೆ. ಬಳಿಕ ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದಾರೆ.

ವಿಚಾರಣೆ ಬಳಿಕ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್ ಮತ್ತು ಸದಸ್ಯ ವೈ.ಎಸ್.ತಮ್ಮಣ್ಣ ಅವರನ್ನೊಳಗೊಂಡ ಆಯೋಗವು, ಮಹಿಳೆಗೆ ಪರಿಹಾರ ನೀಡುವಂತೆ ಆಸ್ಪತ್ರೆಗೆ ಸೂಚಿಸಿದೆ. 

ಚಿಕಿತ್ಸೆ ನೀಡುವಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ಸೇವೆಯಲ್ಲಿ ಕೊರತೆಯಿಲ್ಲದಿದ್ದರೆ, ಆಸ್ಪತ್ರೆಯು ಪರಿಹಾರ ನೀಡಲು ಮುಂದಾಗುತ್ತಿರಲಿಲ್ಲ. ಇದು ಅವರಿಂದಾಗಿರುವ ತಪ್ಪುಗಳನ್ನು ತೋರಿಸುತ್ತಿದೆ. ತಮ್ಮ ತಪ್ಪುಗಳು ಸಾರ್ವಜನಿಕರ ಮುಂದೆ ಬಾರದಂತೆ ನೋಡಿಕೊಳ್ಳಲು ಆಸ್ಪತ್ರೆ ಹಣ ನೀಡಲು ಮುಂದಾಗಿದೆ. ಇದೀಗ ಮಹಿಳೆ ಸ್ವತಂತ್ರವಾಗಿ ಜೀವನ ನಡೆಸಲು ಅಸಮರ್ಥಳಾಗಿರುವುದು ಸ್ಪಷ್ಟವಾಗುತ್ತಿದೆ. ನಮ್ಮ ದೃಷ್ಟಿಯಲ್ಲಿ ಮಹಿಳೆ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆಂದು ಆಯೋಗ ಹೇಳಿದೆ. 

ಆಸ್ಪತ್ರೆಯವರು ಮಹಿಳೆಯ ತಾಯಿ ಬಿಸಿನೀರು ಕೇಳಿದ್ದರು. ಹಾಗಾಗಿಯೇ ನೀಡಲಾಗಿತ್ತು ಎಂದು ಹೇಳುತ್ತಿದೆ. ಆದರೆ, ಆಸ್ಪತ್ರೆಗೆ ರೋಗಿಗಳು ದಾಖಲಾದಾಗ ಅವರ ಯೋಗಕ್ಷೇಮ ಆಸ್ಪತ್ರೆಯ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ರೋಗಿಯ ಸಂಬಂಧಿಕರ ಸಲಹೆ ಹಾಗೂ ಕೋರಿಕೆಯಂತೆ ಆಸ್ಪತ್ರೆ ಕಾರ್ಯನಿರ್ವಹಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com