ಅಪಘಾತ ತಪ್ಪಿಸಲು ಅಖಾಡಕ್ಕಿಳಿದ ಖಾಕಿ: ಜೆಬಿ ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಮುಂದಾದ ಸಂಚಾರಿ ಪೊಲೀಸರು!
ಗುಂಡಿ ಬಿದ್ದಿರುವ ರಸ್ತೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಪ್ಪಿಸಲು ಸ್ವತಃ ಸಂಚಾರಿ ಪೊಲೀಸರೇ ರಸ್ತೆ ಗುಂಡಿ ಮುಚ್ಚಿರುವ ಕಾರ್ಯಕ್ಕೆ ಮುಂದಾಗಿದ್ದಾರೆ.
Published: 25th October 2022 12:36 PM | Last Updated: 25th October 2022 03:14 PM | A+A A-

ರಸ್ತೆ ಗುಂಡಿ ಮುಚ್ಚಿಸುತ್ತಿರುವ ಸಂಚಾರಿ ಪೊಲೀಸ್.
ಬೆಂಗಳೂರು: ಗುಂಡಿ ಬಿದ್ದಿರುವ ರಸ್ತೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಪ್ಪಿಸಲು ಸ್ವತಃ ಸಂಚಾರಿ ಪೊಲೀಸರೇ ರಸ್ತೆ ಗುಂಡಿ ಮುಚ್ಚಿರುವ ಕಾರ್ಯಕ್ಕೆ ಮುಂದಾಗಿದ್ದಾರೆ.
ರಸ್ತೆಯಲ್ಲಿರುವ ಗುಂಡಿಗಳು ಚಿಕ್ಕದಾಗಿದ್ದವು. ಆದರೆ, ಮಳೆಯಿಂದಾಗಿ ಇದೀಗ ಅವುಗಳು ಹೊಂಡಗಳಾಗಿ ನಿರ್ಮಾಣಗೊಂಡಿವೆ. ಇದರಿಂದ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿದ್ದು, ಪ್ರಮುಖ ಸಮಯಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ. ಇದನ್ನು ನಿರ್ವಹಿಸುವುದು ಕಷ್ಟಕರವಾಗುತ್ತಿದೆ ಎಂದು ಜೀವನ್ ಬಿಮಾ ನಗರ ಸಂಚಾರ ಪೊಲೀಸ್ ಸಹಾಯಕ ಉಪನಿರೀಕ್ಷಕ ಪುಟ್ಟಸ್ವಾಮಯ್ಯ ಅವರು ಹೇಳಿದ್ದಾರೆ.
ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ಇಲ್ಲಿಯವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲ, ಆದರೆ ವಾಹನ ಸವಾರರಿಗೆ ಸಾಕಷ್ಟು ಅನಾನುಕೂಲತೆ ಉಂಟಾಗಿದೆ. ಇದು ಹಬ್ಬದ ಸಮಯ ಮತ್ತು ಬಿಬಿಎಂಪಿ ನೌಕರರು ರಜೆಯಲ್ಲಿರುವುದರಿಂದ ಗುಂಡಿಗಳನ್ನು ತುಂಬಲು ಸಮಯ ತೆಗೆದುಕೊಳ್ಳಬಹುದು, ಆದ್ದರಿಂದ ನಾವು ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಪ್ರದೇಶಕ್ಕೆ ಕರೆತಂದು ಗುಂಡಿ ಮುಚ್ಚಿಸುವ ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.
ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಪೊಲೀಸರು ಇಂತಹ ಕಾರ್ಯಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಕಿಲ್ಲರ್ ರಸ್ತೆ ಗುಂಡಿ ಇಲ್ಲದ ಬೆಂಗಳೂರು ಊಹಿಸಿಕೊಳ್ಳಲು ಸಾಧ್ಯವೇ?
ಆದರೆ, ಸಂಚಾರಿ ಪೊಲೀಸರು ಇಂತಹ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಮಾಡದಿರುವುದು ರಸ್ತೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು ಎಂದು ತಜ್ಞರು ಹೇಳಿದ್ದಾರೆ.
ಬಿಬಿಎಂಪಿ ತನ್ನ ಕಾರ್ಯ ವಿಳಂಬ ಮಾಡಿದಾಗಲೆಲ್ಲಾ ಸಂಚಾರ ಪೊಲೀಸರು ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ನಿರ್ಮಾಣ ತ್ಯಾಜ್ಯ ಅಥವಾ ಅವುಗಳ ಅವಶೇಷಗಳನ್ನು ಬಳಸಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಾರೆ. ಇದು ಪರಿಹಾರವಾಗುವುದಿಲ್ಲ ಎಂದು ಸಾರಿಗೆ ತಜ್ಞ ಎಂ.ಎನ್.ಶ್ರೀಹರಿ ಹೇಳಿದ್ದಾರೆ.
ಪಾಲಿಕೆ ಪ್ರಕಾರ, ‘ಫಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಶನ್‌ನಲ್ಲಿ 27,000 ಕ್ಕೂ ಹೆಚ್ಚು ಗುಂಡಿಗಳು ವರದಿಯಾಗಿದ್ದು, ಇದರಲ್ಲಿ ಈಗಾಗಲೇ 14,000 ಕ್ಕೂ ಹೆಚ್ಚು ಗುಂಡಿಗಳನ್ನು ತುಂಬಲಾಗಿದೆ ಎಂದು ಹೇಳಿದೆ.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಭಾರೀ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಇವುಗಳನ್ನು ಮುಚ್ಚಲು ಸುಮಾರು ರೂ.30 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.