ಕಿಲ್ಲರ್ ರಸ್ತೆ ಗುಂಡಿ ಇಲ್ಲದ ಬೆಂಗಳೂರು ಊಹಿಸಿಕೊಳ್ಳಲು ಸಾಧ್ಯವೇ?
ಮಹಾನಗರ ಬೆಂಗಳೂರಿನ 'ಕಿಲ್ಲರ್ ರಸ್ತೆ ಗುಂಡಿ'ಗಳು ಜನರ ಜೀವ ಬಲಿ ಪಡೆಯುತ್ತಿವೆ. ರಸ್ತೆ ಗುಂಡಿಗಳಿಂದಾಗಿ ಕಳೆದ ವರ್ಷ ಏಳು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಕೈ ಕಾಲು ಮುರಿದುಕೊಂಡು ಗಾಯಗೊಂಡಿದ್ದು, ಜೀವ ಭಯದಲ್ಲಿ ವಾಸಿಸುವಂತಾಗಿದೆ.
Published: 25th October 2022 11:48 AM | Last Updated: 25th October 2022 03:12 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಾನಗರ ಬೆಂಗಳೂರಿನ 'ಕಿಲ್ಲರ್ ರಸ್ತೆ ಗುಂಡಿ'ಗಳು ಜನರ ಜೀವ ಬಲಿ ಪಡೆಯುತ್ತಿವೆ. ರಸ್ತೆ ಗುಂಡಿಗಳಿಂದಾಗಿ ಕಳೆದ ವರ್ಷ ಏಳು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಕೈ ಕಾಲು ಮುರಿದುಕೊಂಡು ಗಾಯಗೊಂಡಿದ್ದು, ಜೀವ ಭಯದಲ್ಲಿ ವಾಸಿಸುವಂತಾಗಿದೆ.
ಇದೇ 17 ರಂದು ಬಿನ್ನಿಪೇಟೆಯ ಲುಲು ಮಾಲ್ ಬಳಿ ಬೈಕ್ ಗುಂಡಿಗೆ ಬೀಳುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ತನ್ನ ಮಗಳು ನಿಯಂತ್ರಣ ಕಳೆದುಕೊಂಡಾಗ ಕೆಎಸ್ ಆರ್ ಟಿಸಿ ಬಸ್ ವೊಂದು ಹರಿದು 47 ವರ್ಷದ ಉಮಾದೇವಿ ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಬಿಬಿಎಂಪಿ ದಾಖಲೆ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 7,000 ರಸ್ತೆ ಗುಂಡಿಗಳಿವೆ. 22,000 ರಸ್ತೆ ಗುಂಡಿಗಳನ್ನು ಪಾಲಿಕೆ ಮುಚ್ಚಿರುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಗುಂಡಿಗಳನ್ನು ಮುಚ್ಚುವಂತೆ ಕೋರ್ಟ್ ಬಿಬಿಎಂಪಿಗೆ ಆದೇಶಿಸಿದೆ. ಈ ಸಂಬಂಧ ಅನೇಕ ಪಿಐಎಲ್ ಕೂಡಾ ಹಾಕಲಾಗಿದೆ. ದೂರು ದಾಖಲಾಗಿದ್ದು, ಪದೇ ಪದೇ ಮನವಿ ಮಾಡುತ್ತಿದ್ದರೂ ಅಪಘಾತಗಳು ಸಂಭವಿಸುತ್ತಲೇ ಇವೆ. ಆದರೆ, ಸರ್ಕಾರ ಮತ್ತು ಬಿಬಿಎಂಪಿ ಎಂಜಿನಿಯರ್ ಗಳು ಮಾತ್ರ ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದಾರೆ. ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ರಸ್ತೆ ಗುಂಡಿಯಿಂದಾಗಿ ನನ್ನ ಕಾಲಿಗೆ ಗಾಯವಾಗಿದ್ದು, ಬಿಬಿಎಂಪಿಗೆ ದೂರು ಸಲ್ಲಿಸಿದ್ದೆ ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜಾಜಿನಗರದ ನಿವಾಸಿ ಡಿ. ದಿಲೀಪ್ ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿ: ಬೆಂಗಳೂರು ರಸ್ತೆಗಳು ಗುಂಡಿಮಯ: ತನ್ನ ಇಂಜಿನಿಯರ್ ಗಳಿಗೆ ಪಾಠ ಹೇಳಲು ಬಿಬಿಎಂಪಿ ಮುಂದು
ಬಿಬಿಎಂಪಿ ಆ್ಯಪ್ ' ಪಿಕ್ಸ್ ಮೈ ಸ್ಟ್ರೀಟ್ ಆ್ಯಪ್' ಪ್ರಕಾರ ಅಕ್ಟೋಬರ್ 19 ರವರೆಗೂ 27,875 ರಸ್ತೆ ಗುಂಡಿಗಳ ಪೈಕಿ 14,517 ಗುಂಡಿಗಳನ್ನು ಮುಚ್ಚಲಾಗಿದೆ ಮತ್ತು 4,616 ದೂರುಗಳನ್ನು ತಿರಸ್ಕರಿಸಲಾಗಿದೆ. ಮತ್ತೆ ಮತ್ತೆ ಗುಂಡಿ ಬೀಳಲು ಭಾರೀ ಮಳೆ ಕಾರಣ ಎಂದು ಬಿಬಿಎಂಪಿ ಹೇಳುತ್ತಿದ್ದರೆ, ಕಳಪೆ ಮಟ್ಟದ ಸಾಮಾಗ್ರಿಗಳು, ವ್ಯಾಪಕ ಭ್ರಷ್ಟಾಚಾರ ಇದಕ್ಕೆ ಕಾರಣ ಎಂದು ತಜ್ಞರು ಆರೋಪಿಸುತ್ತಾರೆ. ರಸ್ತೆಗುಂಡಿ ಮುಚ್ಚಲು ಗುಣಮಟ್ಟದ ಕಾರ್ಯವಿಧಾನ ಅನುಸರಿಸುತ್ತಿಲ್ಲ ಎಂದು ಸಂಚಾರಿ ತಜ್ಞ ಎಂಎನ್ ಶ್ರೀಹರಿ ಹೇಳಿದ್ದಾರೆ.