ಬೆಂಗಳೂರು ರಸ್ತೆಗಳು ಗುಂಡಿಮಯ: ತನ್ನ ಇಂಜಿನಿಯರ್ ಗಳಿಗೆ ಪಾಠ ಹೇಳಲು ಬಿಬಿಎಂಪಿ ಮುಂದು

ನಗರದ ರಸ್ತೆಗಳು ಗುಂಡಿಮಯಗೊಂಡಿದ್ದು, ಅಧಿಕಾರಿಗಳ ಅಸಮರ್ಥತೆಗೆ ಸಾರ್ವಜನಿಕ ವಲಯದಿಂದ ಭಾರೀ ಅಸಮಾಧಾನಗಳು ವ್ಯಕ್ತವಾಗತೊಡಗಿವೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಎಂಜಿನಿಯರ್‌ಗಳಿಗೆ ರಸ್ತೆ ಮೂಲಸೌಕರ್ಯದೊಂದಿಗೆ ಗುಂಡಿಗಳನ್ನು ಹೇಗೆ ಮುಚ್ಚುವುದು ಎಂಬುದರ ಕುರಿತು ತರಬೇತಿ ನೀಡಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ರಸ್ತೆಗಳು ಗುಂಡಿಮಯಗೊಂಡಿದ್ದು, ಅಧಿಕಾರಿಗಳ ಅಸಮರ್ಥತೆಗೆ ಸಾರ್ವಜನಿಕ ವಲಯದಿಂದ ಭಾರೀ ಅಸಮಾಧಾನಗಳು ವ್ಯಕ್ತವಾಗತೊಡಗಿವೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಎಂಜಿನಿಯರ್‌ಗಳಿಗೆ ರಸ್ತೆ ಮೂಲಸೌಕರ್ಯದೊಂದಿಗೆ ಗುಂಡಿಗಳನ್ನು ಹೇಗೆ ಮುಚ್ಚುವುದು ಎಂಬುದರ ಕುರಿತು ತರಬೇತಿ ನೀಡಲು ಮುಂದಾಗಿದೆ. 

ಈ ಕುರಿತು ಮಾತನಾಡಿದ ಬಿಬಿಎಂಪಿ ಇಂಜಿನಿಯರ್‌ ಇನ್‌ ಚೀಫ್‌ ಬಿಎಸ್‌ ಪ್ರಹ್ಲಾದ್‌ ಅವರು, ಅಕ್ಟೋಬರ್‌ 31ರಂದು ಟೌನ್‌ ಹಾಲ್‌ ಮತ್ತು ತಾಂತ್ರಿಕ ಸಲಹಾ ಸಮಿತಿಯಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ನಿವೃತ್ತ ಎಂಜಿನಿಯರ್‌ಗಳಾದ ಪ್ರೊ.ಜಯ ಗೋಪಾಲ್‌, ಜಗದೀಶ್‌ ಮತ್ತಿತರ ತಜ್ಞರು ರಸ್ತೆ ಗುಂಡಿಗಳನ್ನು ತುಂಬಲು ಬಿಬಿಎಂಪಿ ಎಂಜಿನಿಯರ್‌ಗಳಿಗೆ ತರಬೇತಿ ನೀಡಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಪಾಲಿಕೆಯು ರಸ್ತೆಗುಂಡಿಗಳನ್ನು ಸರಿಪಡಿಸಲು ವಾರ್ಷಿಕ 30 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದು, ಬಿಬಿಎಂಪಿ ಎಂಜಿನಿಯರ್‌ಗಳಿಗೆ ತರಬೇತಿ ನೀಡಲು ಖಾಸಗಿ ಏಜೆನ್ಸಿಗಳನ್ನು ತೊಡಗಿಸಿಕೊಂಡಿದೆ ಎಂಬ ಮಾತುಗಳು ಕೇಳಿ ಬಂದಿತ್ತು. 

ಇದಕ್ಕೆ ಸ್ಪಷ್ಟನೆ ನೀಡಿರುವ ಪ್ರಹ್ಲಾದ್ ಅವರು, ರಸ್ತೆ ಗುಂಡಿ ತುಂಬಲು ಖಾಸಗಿಯವರಿಗೆ ಪಾಲಿಕೆ ಅವಕಾಶ ನೀಡುವುದಿಲ್ಲ. ಯಾವುದೇ ಖಾಸಗಿ ಸಂಸ್ಥೆಗೂ ಹಣ ಮಂಜೂರು ಮಾಡುವುದಿಲ್ಲ. ದಿನವಿಡೀ ವಿಚಾರ ಸಂಕಿರಣ ನಡೆಯಲಿದ್ದು, ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಮತ್ತು ಹೆಚ್ಚು ಕಾಲ ಉಳಿಯುವ ರೀತಿಯಲ್ಲಿ ಗುಂಡಿಗಳನ್ನು ಹೇಗೆ ಸರಿಪಡಿಸುವುದು ಎಂಬುದರ ಮೇಲೆ ಬೆಳಕು ಚೆಲ್ಲಲಿದೆ ಎಂದರು. 

ಇತ್ತೀಚೆಗೆ ‘ಫಿಕ್ಸ್ ಮೈ ಸ್ಟ್ರೀಟ್ ಅಪ್ಲಿಕೇಶನ್’ ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 27,000 ಕ್ಕೂ ಹೆಚ್ಚು ಗುಂಡಿಗಳು ಕಂಡುಬಂದಿದ್ದು, ಅದರಲ್ಲಿ 14,000 ಗುಂಡಿಗಳನ್ನು ಮುಚ್ಚಲಾಗಿದೆ. 4,000 ದೂರುಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದ ಕಾರಣ ನಿರ್ಲಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com