ಭಾರಿ ಮಳೆ ಎಫೆಕ್ಟ್: ತೊರೆಕಾಡನಹಳ್ಳಿ ಕಾವೇರಿ ನೀರು ಪಂಪ್​ಸ್ಟೇಷನ್ ಜಲಾವೃತ, ಬೆಂಗಳೂರಿಗೆ ನೀರು ಪೂರೈಕೆಯಲ್ಲಿ 2 ದಿನ ವ್ಯತ್ಯಯ

ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಇದೀಗ ಇದೇ ಮಳೆಯಿಂದಾಗಿ ಬೆಂಗಳೂರಿಗೆ ಪೂರೈಕೆಯಾಗುತ್ತಿದ್ದ ಕಾವೇರಿ ನೀರು ಸರಬರಾಜು ಸೇವೆಯಲ್ಲೂ ಗಂಭೀರ ವ್ಯತ್ಯಯ ಕಂಡುಬರಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಇದೀಗ ಇದೇ ಮಳೆಯಿಂದಾಗಿ ಬೆಂಗಳೂರಿಗೆ ಪೂರೈಕೆಯಾಗುತ್ತಿದ್ದ ಕಾವೇರಿ ನೀರು ಸರಬರಾಜು ಸೇವೆಯಲ್ಲೂ ಗಂಭೀರ ವ್ಯತ್ಯಯ ಕಂಡುಬರಲಿದೆ.

ಈ ಬಗ್ಗೆ ಸ್ವತಃ ಜಲ ಮಂಡಳಿ ಮಾಹಿತಿ ನೀಡಿದ್ದು, ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಧಾರಾಕಾರ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಮಳವಳ್ಳಿ ತಾಲ್ಲೂಕು ಟಿ.ಕೆ.ಹಳ್ಳಿಯಲ್ಲಿರುವ ಕಾವೇರಿ ನೀರಿನ ಜಲರೇಚಕ ಯಂತ್ರಾಗಾರ (ಪಂಪ್​ಸ್ಟೇಷನ್) ಜಲಾವೃತಗೊಂಡಿದ್ದು, ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಏರುಪೇರಾಗಲಿದೆ. ಇಂದು ಮತ್ತು ನಾಳೆ ಅಂದರೆ ಸೆಪ್ಟೆಂಬರ್ 5 ಮತ್ತು 6ರಂದು ಸಿಲಿಕಾನ್ ಸಿಟಿಗೆ ಸರಬರಾಜಾಗುತ್ತಿದ್ದ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ.

ಇದೇ ಟಿ.ಕೆ.ಹಳ್ಳಿ ಪಂಪ್ ಸ್ಟೇಷನ್ ನಿಂದಲೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಇದೀಗ ಯಂತ್ರಾಗಾರಕ್ಕೆ ಹಾನಿಯಾಗಿದ್ದು, ಸ್ಥಳಕ್ಕೆ ದೌಡಾಯಿಸಿರುವ ಅಧಿಕಾರಿಗಳು ದುರಸ್ತಿ ಕಾರ್ಯ ನಡೆಸಿದ್ದಾರೆ. ಇನ್ನು ವಿಚಾರ ತಿಳಿದ ತಕ್ಷಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಪ್ರವಾಸ ಕೈಗೊಂಡಿದ್ದು, ಟಿ.ಕೆ.ಹಳ್ಳಿಗೆ ಧಾವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಸಿಎಂ ಬಸವರಾಜ ಬೊಮ್ಮಾಯಿ ಇಂದು (ಸೆ 5, ಸೋಮವಾರ) ಮಧ್ಯಾಹ್ನ ಮಂಡ್ಯಕ್ಕೆ ತೆರಳಲಿದ್ದು, ಟಿಕೆ ಹಳ್ಳಿಯಲ್ಲಿರುವ ಬೆಂಗಳೂರು ನೀರು ಸರಬರಾಜು ಮಂಡಳಿಯ ಘಟಕಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ವಿಧಾನಸೌಧ ಹಾಗೂ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಲ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಅಲ್ಲಿಂದ ನೇರವಾಗಿ ಮಂಡ್ಯಕ್ಕೆ ತೆರಳಲಿದ್ದಾರೆ.

ಈ  ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ ಅವರು, 'ಮಂಡ್ಯದಲ್ಲಿ ಧಾರಾಕಾರ ಮಳೆಯಿಂದ ಟಿ.ಕೆ.ಹಳ್ಳಿ ಘಟಕದಲ್ಲಿ ತೊಂದರೆ ಆಗಿದೆ. ಟಿ.ಕೆ.ಹಳ್ಳಿ ಕುಡಿಯುವ ನೀರಿನ ಘಟಕಕ್ಕೆ ನಾನು ಭೇಟಿ ನೀಡುತ್ತೇನೆ. ಈಗಾಗಲೇ BWSSB ಸಿಬ್ಬಂದಿ ಮತ್ತು ಎಂಜಿನಿಯರ್​ಗಳು ಅಲ್ಲಿಗೆ ಹೋಗಿದ್ದಾರೆ. ಇಂದು ಸಂಜೆಯೊಳಗೆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ. ಬೆಂಗಳೂರಿನ ಮಹದೇವವಪುರ, ಬೊಮ್ಮನಹಳ್ಳಿಯಲ್ಲಿ ಹೆಚ್ಚು ಮಳೆ ಆಗಿದೆ. ಬಿಬಿಎಂಪಿ ಕಮಿಷನರ್​ ಜತೆಗೂ ಮಾತನಾಡಿದ್ದೇನೆ. ಎರಡು ಎಸ್​ಡಿಆರ್​ಎಫ್​ ತಂಡವನ್ನು ಸ್ಥಳಕ್ಕೆ ಕಳಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜಾಲತಾಣದ ಪ್ರಕಾರ ಬೆಂಗಳೂರಿಗೆ ಕಾವೇರಿಯಿಂದ ಪ್ರಸ್ತುತ ಪ್ರತಿದಿನ 1,450 ದಶಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. 57 ನೆಲಮಟ್ಟದ ಜಲಾಶಯಗಳು ಹಾಗೂ 39 ಓವರ್​ಹೆಡ್​ ಟ್ಯಾಂಕ್​ಗಳು ಇವೆ. ಒಂದು ದಿನಕ್ಕೆ ಸರಾಸರಿ 10.15 ಲಕ್ಷ ಮನೆಗಳಿಗೆ ನೀರು ಸರಬರಾಜಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com