ಸಹಜ ಸ್ಥಿತಿಯತ್ತ ಬೆಂಗಳೂರು; ರಾಜ್ಯದ ಹಲವೆಡೆ ವರುಣನ ರುದ್ರ ನರ್ತನ; ಸೇತುವೆಗಳು ಜಲಾವೃತ; ಸೆ.11 ರವರೆಗೆ ಭಾರೀ ಮಳೆ; ಕರಾವಳಿಯಲ್ಲಿ ರೆಡ್ ಅಲರ್ಟ್​

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಧವಾರವೂ ಗುಡುಗು–ಸಿಡಿಲು ಸಹಿತ ಧಾರಾಕಾರ ಮಳೆಯಾಗಿರುವುದರಿಂದ ನದಿ, ಹಳ್ಳ–ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಸೇತುವೆ ಹಾಗೂ ರಸ್ತೆಗಳು ಮುಳುಗಡೆಯಾಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮನೆಗಳಿಗೂ ಹಾನಿಯಾಗಿದೆ.
ಸಹಜ ಸ್ಥಿತಿಯತ್ತ ಬೆಂಗಳೂರು ನಗರ
ಸಹಜ ಸ್ಥಿತಿಯತ್ತ ಬೆಂಗಳೂರು ನಗರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಧವಾರವೂ ಗುಡುಗು–ಸಿಡಿಲು ಸಹಿತ ಧಾರಾಕಾರ ಮಳೆಯಾಗಿರುವುದರಿಂದ ನದಿ, ಹಳ್ಳ–ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಸೇತುವೆ ಹಾಗೂ ರಸ್ತೆಗಳು ಮುಳುಗಡೆಯಾಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮನೆಗಳಿಗೂ ಹಾನಿಯಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಮಳೆಯಾಗಿರುವುದರಿಂದ ಮಲಪ್ರಭಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ದಡದ ಹೊಲದಲ್ಲಿದ್ದ ಪಂಪ್ ಸೆಟ್ ಬಿಚ್ಚಿಕೊಂಡು ಬರಲು ಹೋಗಿದ್ದ ದೇವಾನಂದ ಅವರು ನೀರಿನ ಸೆಳೆವಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಕರ್ನಾಟಕದ ಕರಾವಳಿ  ಮತ್ತು ದಕ್ಷಿಣ ಒಳನಾಡಿನ ಎಲ್ಲ ಭಾಗದಲ್ಲೂ ಮುಂದಿನ 4 ದಿನ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಮಲೆನಾಡು ಭಾಗದಲ್ಲಿ, ಕೊಡಗು  ಹಾಸನ, ಚಿಕ್ಕಮಗಳೂರು  ಮತ್ತು ಶಿವಮೊಗ್ಗ, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ನಾಳೆಯಿಂದ ಕರಾವಳಿಯ 3 ಜಿಲ್ಲೆಗಳು, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ರಾಯಚೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಈ ಪ್ರದೇಶಗಳಲ್ಲಿ ಗುಡುಗು ಸಹಿತ ಅಬ್ಬರ ಮಳೆ ಸುರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸುಮಾರು 20 ಸೆಂ. ಮೀ.ಗಿಂತ ಹೆಚ್ಚು ಮಳೆ ಆಗಲಿದೆ.

ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಇಂದಿನಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್, ರಾಯಚೂರು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ದಾವಣಗೆರೆ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಇಂದಿನಿಂದ ಸೆ. 11ರವರೆಗೆ ಭಾರೀ ಮಳೆಯಾಗಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇನ್ನೂ ನಿರಂತರ ಮಳೆ ಸುರಿದು ಹಲವು ಸಮಸ್ಯೆಗಳ ಕೂಪವಾಗಿದ್ದ ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ ಕೊಂಚ ಮಟ್ಟಿಗೆ ತಗ್ಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತತ್ತರಿಸಿರುವ ಬೆಂಗಳೂರಿನ ಕೆಲವು ಭಾಗಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವಂತೆ ಕಂಡುಬಂದಿದ್ದು, ಕೆಲವು ಪ್ರದೇಶಗಳಲ್ಲಿ ಪ್ರವಾಹದ ನೀರು ಇಳಿಮುಖವಾಗಿದೆ.

ಜಲಾವೃತಗೊಂಡಿದ್ದ ರಸ್ತೆಗಳಲ್ಲಿ ನೀರನ್ನು ತೆರವುಗೊಳಿಸಲಾಗಿದೆ, ಜೊತೆಗೆ ಹಲವು ಪ್ರದೇಶಗಳಲ್ಲಿ ತುಂಬಿ ನಿಂತಿದ್ದ ನೀರನ್ನು ಬೇರೆಡೆ ಹರಿಸುವ ಕೆಲಸ ನಡೆಯುತ್ತಿದೆ. ಟ್ರಾಫಿಕ್ ಬಹುತೇಕ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಮತ್ತು ಶೀಘ್ರದಲ್ಲೇ ಸಂಪೂರ್ಣ ಸಹಜ ಸ್ಥಿತಿಗೆ ಭರವಸೆ ಇದೆ ಎಂದು ಮೂಲಗಳು ತಿಳಿಸಿವೆ. ತುಂತುರು ಮಳೆಯಿಂದ ನಿತ್ಯ ಜೀವನ ಅಸ್ತವ್ಯಸ್ತಗೊಂಡಿದ್ದ ಜನರಿಗೆ ಮಳೆ  ಬಿಡುವು ಕೊಟ್ಟಿರುವುದು ನೆಮ್ಮದಿ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com