ವಿಮ್ಸ್ ದುರಂತ: ರೋಗಿಗಳ ಸಾವು ವಿದ್ಯುತ್ ಕಡಿತದಿಂದ ಆಗಿರದೇ ಇರಬಹುದು: ಸಚಿವ ಡಾ ಕೆ ಸುಧಾಕರ್

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್‌) ಐಸಿಯುನಲ್ಲಿದ್ದ ಇಬ್ಬರು ರೋಗಿಗಳ ಸಾವಿಗೆ ವಿದ್ಯುತ್ ವೈಫಲ್ಯ ಕಾರಣವಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸಚಿವ ಸುಧಾಕರ್
ಸಚಿವ ಸುಧಾಕರ್
Updated on

ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್‌) ಐಸಿಯುನಲ್ಲಿದ್ದ ಇಬ್ಬರು ರೋಗಿಗಳ ಸಾವಿಗೆ ವಿದ್ಯುತ್ ವೈಫಲ್ಯ ಕಾರಣವಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವೈದ್ಯಕೀಯ ವರದಿಗಳು ಸಾವಿನ ಹಿಂದೆ ಆರೋಗ್ಯ ಸಮಸ್ಯೆಗಳು ಕಾರಣವೆಂದು ತೋರಿಸುತ್ತವೆ ಎಂದು ಅವರು ಹೇಳಿದರು. “ನಾನು ವಿಮ್ಸ್ ಸಿಬ್ಬಂದಿ ಮತ್ತು ನಿರ್ದೇಶಕರೊಂದಿಗೆ ವಿವರವಾದ ಸಭೆ ನಡೆಸಿದ್ದೇನೆ. ತನಿಖಾ ಸಮಿತಿ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು' ಎಂದು ಸುಧಾಕರ್ ಹೇಳಿದ್ದಾರೆ.

ವಿಮ್ಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ ಸಚಿವರು, ನನ್ನ ಭೇಟಿಯ ಸಮಯದಲ್ಲಿ ನಾನು ವಿದ್ಯುತ್ ವೈಫಲ್ಯದ ಬಗ್ಗೆ ವಿವರಗಳನ್ನು ಕೇಳಿದೆ. ಸೆಪ್ಟೆಂಬರ್ 14ರ ಬೆಳಗ್ಗೆ ವಿದ್ಯುತ್ ಕಡಿತಗೊಂಡಿರುವುದು ಗಮನಕ್ಕೆ ಬಂದಿದ್ದು, ಐಸಿಯು ವಾರ್ಡ್‌ಗೆ 90 ನಿಮಿಷಗಳ ಬ್ಯಾಕಪ್ ವಿದ್ಯುತ್ ಸರಬರಾಜು ಇದೆ ಎಂದು ನನಗೆ ತಿಳಿದಿದೆ ಎಂದು ಅವರು ವಿವರಿಸಿದರು.

ಚೆಟ್ಟಮ್ಮ (30) ಎಂಬ ರೋಗಿ ಹಾವು ಕಡಿತದಿಂದ ಮೃತಪಟ್ಟರೆ, ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಹುಸೇನ್ (35) ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ತನಿಖಾ ಸಮಿತಿಯ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ವಿವರ ಸಂಗ್ರಹಿಸಿದ್ದಾರೆ. ಆಸ್ಪತ್ರೆಯಲ್ಲಿ ವಿದ್ಯುತ್ ಸರಬರಾಜನ್ನು ನೋಡಿಕೊಳ್ಳಲು ನಾವು ಒಬ್ಬ ಮೀಸಲಾದ ಅಧಿಕಾರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

ವಿದ್ಯುತ್ ಕಡಿತದ ಹಿಂದೆ ಕಿಡಿಗೇಡಿಗಳ ಕೈವಾಡವಿದೆ ಎಂಬ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ತನಿಖೆ ನಡೆಯುತ್ತಿರುವಾಗ ಪ್ರತಿಕ್ರಿಯಿಸುವುದು ತಪ್ಪು ಎಂದು ಡಾ.ಸುಧಾಕರ್ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ವಿಮ್ಸ್ ಆಸ್ಪತ್ರೆಯ ಕಾರ್ಯಾಚರಣೆಯನ್ನು ಯಾರಾದರೂ ಹಾಳುಗೆಡವಲು ಯತ್ನಿಸಿದರೆ ಪೊಲೀಸ್ ದೂರು ದಾಖಲಿಸುವಂತೆ ವಿಮ್ಸ್ ನಿರ್ದೇಶಕರಿಗೆ ತಿಳಿಸಿದ್ದಾರೆ. ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳ ಸಾವಿಗೆ ಸರ್ಕಾರವೇ ಹೊಣೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಕೋಲಾರದಲ್ಲಿ ಹೇಳಿದ್ದಾರೆ.

ರಾಜೀನಾಮೆ ನೀಡುವುದಿಲ್ಲ: ಸುಧಾಕರ್ ಪರ ಬ್ಯಾಟ್ ಬೀಸಿದ ಸಿಎಂ
ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ವಿಮ್ಸ್) ಇತ್ತೀಚೆಗೆ ಸಂಭವಿಸಿದ ಸಾವುಗಳ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೆಂಬಲಕ್ಕೆ ನಿಂತಿದ್ದಾರೆ. ಪ್ರತಿ ವಿಚಾರದಲ್ಲೂ ರಾಜಕೀಯ ಮಾಡುವ ಅಭ್ಯಾಸ ಕಾಂಗ್ರೆಸ್‌ನದ್ದು ಎಂದು ಬೊಮ್ಮಾಯಿ ಟೀಕಿಸಿದ್ದು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಮಸೂದೆ ಮಂಡಿಸಿದಾಗ ವೈದ್ಯರು 5 ದಿನಗಳ ಮುಷ್ಕರ ನಡೆಸಿ 80 ಮಂದಿ ಸಾವನ್ನಪ್ಪಿದ್ದರು. ಕಾಂಗ್ರೆಸ್ ಸರ್ಕಾರ ನೈತಿಕ ಹೊಣೆ ಹೊತ್ತುಕೊಂಡಿದೆಯೇ? ಆ ಸಮಯದಲ್ಲಿ ಯಾರಾದರೂ ರಾಜೀನಾಮೆ ನೀಡಿದ್ದೀರಾ? ಆಗಿನ ಆರೋಗ್ಯ ಸಚಿವರು ರಾಜೀನಾಮೆ ನೀಡಿದ್ದಾರೆಯೇ?’’ ಎಂದು ಬೊಮ್ಮಾಯಿ ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com