ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿರುವ ತಂಬಾಕು ಎಚ್ಚರಿಕೆ ಸಂದೇಶ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೇಕಿಲ್ಲ?

ತಂಬಾಕು ಎಚ್ಚರಿಕೆ ಸಂದೇಶಗಳನ್ನು ಪ್ರದರ್ಶಿಸುವಂತೆ ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್ ಮುಂತಾದ ಒಟಿಟಿ(ಓವರ್ ದಿ ಟಾಪ್) ಪ್ಲಾಟ್‌ಫಾರ್ಮ್‌ಗಳಿಗೆ ಸೂಚಿಸುವಂತೆ ಒತ್ತಾಯಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಂಬಾಕು ಎಚ್ಚರಿಕೆ ಸಂದೇಶಗಳನ್ನು ಪ್ರದರ್ಶಿಸುವಂತೆ ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್ ಮುಂತಾದ ಒಟಿಟಿ(ಓವರ್ ದಿ ಟಾಪ್) ಪ್ಲಾಟ್‌ಫಾರ್ಮ್‌ಗಳಿಗೆ ಸೂಚಿಸುವಂತೆ ಒತ್ತಾಯಿಸಿ ಕರ್ನಾಟಕದ ಹಲವು ಉಪಕುಲಪತಿಗಳು ಕೇಂದ್ರ ಆರೋಗ್ಯ ಸಚಿವ ಡಾ. ಮನ್‌ಸುಖ್‌ ಮಾಂಡವೀಯ ಅವರಿಗೆ ಪತ್ರ ಬರೆದಿದ್ದಾರೆ. ಯುವಜನರಲ್ಲಿ ಒಟಿಟಿ ಬಳಕೆ ಗಮನಾರ್ಹವಾಗಿ ಹೆಚ್ಚಿದ್ದು, ಅವರು ತಂಬಾಕಿನ ಚಟಕ್ಕೆ ಬೀಳುವುದನ್ನು ತಪ್ಪಿಸಲು ಒಟಿಟಿಗಳ ಮೇಲೆ ನಿಯಂತ್ರಣ ಅಗತ್ಯ ಎಂದು ಉಪಕುಲಪತಿಗಳು ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಯಂತ್ರಣ ಕೋರಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕ್ರೈಸ್ಟ್ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಸಿಎಂಆರ್ ವಿಶ್ವವಿದ್ಯಾಲಯ, ಕೆಎಲ್‌ಇ ವಿಶ್ವವಿದ್ಯಾಲಯ ಮತ್ತು ಜೈನ್ ವಿಶ್ವವಿದ್ಯಾಲಯದ ಉಪಕುಲಪತಿಗಳು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಪೋಷಕರು, ಶಿಕ್ಷಕರು, ಯುವಕರು ಮತ್ತು ತಂಬಾಕು ಮುಕ್ತ ಕರ್ನಾಟಕ ವೇದಿಕೆ ಸೇರಿದಂತೆ ತಂಬಾಕು ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಹಲವು ಸಂಸ್ಥೆಗಳು ಕೂಡ ತಂಬಾಕು ಎಚ್ಚರಿಕೆ ಸಂದೇಶಗಳನ್ನು ಪ್ರದರ್ಶಿಸುವಂತೆ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಯಂತ್ರಣಕ್ಕಾಗಿ ಕೇಂದ್ರ ಆರೋಗ್ಯ ಸಚಿವರನ್ನು ಒತ್ತಾಯಿಸಿದ್ದಾರೆ.

'ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಜನರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ಇಂದಿಗೂ ಮುಂದುವರಿಯುತ್ತಿದೆ. ಧೂಮಪಾನ/ತಂಬಾಕು ಜಗಿಯುವ ದೃಶ್ಯ ಬಂದಾಗ ಆರೋಗ್ಯ ಎಚ್ಚರಿಕೆ ಪ್ರದರ್ಶನ ಕಡ್ಡಾಯವಾಗಿದೆ ಮತ್ತು ಅದನ್ನು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ತಂಬಾಕು ಎಚ್ಚರಿಕೆ ಸಂದೇಶಗಳನ್ನು ಪ್ರದರ್ಶಿಸುತ್ತಿಲ್ಲ. ಇದು ಯುವಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ತಂಬಾಕು ಚಟದಿಂದ ಯುವಕರನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ, ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸೂಕ್ತ ಎಚ್ಚರಿಕೆ ನೀಡುವ ಮೂಲಕ ಅವುಗಳಲ್ಲಿ ತಂಬಾಕು ಬಳಕೆಯ ದೃಶಗಳನ್ನು ನಿಯಂತ್ರಿಸಲು ನಾವು ಕೇಂದ್ರ ಆರೋಗ್ಯ ಸಚಿವರನ್ನು ಒತ್ತಾಯಿಸುತ್ತೇವೆ' ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಂ ಕೆ ರಮೇಶ್ ಹೇಳಿದರು.

ಸಿನಿಮಾಟೋಗ್ರಫಿ ಕಾಯಿದೆ, 1952 ಮತ್ತು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ವಿತರಣೆ) ಕಾಯಿದೆ, 2003 ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ತಂಬಾಕು ದೃಶ್ಯಗಳ ಪ್ರದರ್ಶನವನ್ನು ನಿಯಂತ್ರಿಸುತ್ತವೆ. ಈ ನಿಯಮಗಳನ್ನು ಚಿತ್ರಮಂದಿರಗಳ ಮಾಲೀಕರು ಮತ್ತು ಟಿವಿ ಕಾರ್ಯಕ್ರಮಗಳ ಪ್ರಸಾರಕರು ತಕ್ಕಮಟ್ಟಿಗೆ ಅನುಸರಿಸುತ್ತಿದ್ದಾರೆ. ಆದರೆ, ಈ ನಿಯಮಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕಾರ್ಯಗತಗೊಳಿಸಿಲ್ಲ. ಚಲನಚಿತ್ರ ಮತ್ತು ವೆಬ್ ಸೀರೀಸ್ ಗಳಲ್ಲಿ ತಂಬಾಕು ಬಳಕೆಯ ವೈಭವೀಕರಣ, ಯುವಜನರಲ್ಲಿ ತಂಬಾಕು ಸೇವನೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ರಾಜ್ಯದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ದುಡಿಯುತ್ತಿರುವ ಒಕ್ಕೂಟವಾದ ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಸಂಚಾಲಕರಾದ ಶ್ರೀ ಎಸ್ ಜೆ ಚಂದರ್, 'ಇತ್ತೀಚಿನ ವರ್ಷಗಳಲ್ಲಿ ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ಮುಂತಾದ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮನರಂಜನೆಯ ಮೂಲವಾಗಿದೆ. ಅವುಗಳಲ್ಲಿ ಬಿತ್ತರಗೊಳ್ಳುವ ಕಾರ್ಯಕ್ರಮಗಳು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಅಗತ್ಯತೆಗಳೆಡೆಗೆ ಸೂಕ್ಷ್ಮವಾಗಿರಬೇಕು. ಅಗತ್ಯವಿರುವ ಕಡೆಗಳಲ್ಲಿ ಹಕ್ಕುಬಾಧ್ಯತೆ ನಿರಾಕರಣೆಗಳನ್ನು (Disclaimers) ಒದಗಿಸಬೇಕು. ಈ ಪ್ಲಾಟ್‌ಫಾರ್ಮ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಕಂಟೆಂಟ್ ಗಳು ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆಗಳನ್ನು ಹೊಂದಿರಬೇಕು. ಎಚ್ಚರಿಕೆ ಸಂದೇಶಗಳ ಮೂಲಕ ಯುವಜನರು ಮತ್ತು ಇತರ ವೀಕ್ಷಕರಿಗೆ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ತಿಳಿಸಬೇಕು' ಎಂದು ಹೇಳಿದರು. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ತಂಬಾಕು ಎಚ್ಚರಿಕೆ ಪ್ರದರ್ಶನವನ್ನು ಕಡ್ಡಾಯಗೊಳಿಸಿದರೆ ಭಾರತವು ಜಾಗತಿಕವಾಗಿ ಮಾದರಿಯಾಗುತ್ತದೆ ಎಂದ ಅವರು, ಈ ಸರಳ ಕ್ರಮದಿಂದ ಯುವಕರು ತಂಬಾಕಿನೊಂದಿಗೆ ಪ್ರಯೋಗಗಳನ್ನು ಮಾಡಿ ಜೀವನಪರ್ಯಂತ ಅವುಗಳ ವ್ಯಸನಿಗಳಾಗುವುದನ್ನು ತಡೆಯುಬಹುದು ಎಂದು ತಿಳಿಸಿದರು.

'ಒಟಿಟಿ ಪ್ಲಾಟ್‌ಫಾರ್ಮ್‌ಗಳು ವ್ಯಾಪಕ ಶ್ರೇಣಿಯ ಮನರಂಜನೆಯನ್ನು ನೀಡುವುದರಿಂದ ಯುವಜನರಲ್ಲಿ ಜನಪ್ರಿಯವಾಗಿವೆ. ಹೇರಳವಾದ ತಂಬಾಕು ಬಳಕೆ ದೃಶ್ಯಗಳಿಂದ ಯುವಜನರು ಸುಲಭವಾಗಿ ಪ್ರಭಾವಿತರಾಗುತ್ತಾರೆ ಮತ್ತು ತಂಬಾಕು ಬಳಕೆಯನ್ನು ಆರಂಭಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಬ್ಬ ಪೋಷಕಿಯಾಗಿ ಅನಿಯಂತ್ರಿತ ತಂಬಾಕು ಚಿತ್ರಣದ ಬಗ್ಗೆ ನನಗೆ  ಕಳವಳವಾಗುತ್ತದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ತಂಬಾಕು ಎಚ್ಚರಿಕೆಗಳನ್ನು ಕಡ್ಡಾಯಗೊಳಿಸುವಂತೆ ನಾವು ಕೇಂದ್ರ ಆರೋಗ್ಯ ಸಚಿವರನ್ನು ಒತ್ತಾಯಿಸುತ್ತೇವೆ' ಎಂದು ಹದಿಹರೆಯದ ಮಕ್ಕಳ ಪೋಷಕರಾದ ಪದ್ಮಾ ವೇಣು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com