ಸ್ಯಾಂಕಿ ಟ್ಯಾಂಕ್ ರಸ್ತೆ ಅಗಲೀಕರಣ ವಿರುದ್ಧ ಪ್ರತಿಭಟನೆ: ಎಫ್ಐಆರ್ ಕುರಿತು ತನಿಖೆ ನಡೆಸುವಂತೆ ಸ್ಥಳೀಯರ ಆಗ್ರಹ

ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಕಾಮಗಾರಿ ವಿರೋಧಿಸಿ ನಾಗರಿಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ವಿರುದ್ಧ ಎರಡು ದಿನಗಳಿಂದ ಸಹಿ ಚಳವಳಿ ನಡೆಸಿದ ನಿವಾಸಿ ಕ್ಷೇಮಾಭಿವೃದ್ಧಿ ಸಂಘಟನೆಗಳು ಹಾಗೂ ಇತರರು, ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಕಾಮಗಾರಿ ವಿರೋಧಿಸಿ ನಾಗರಿಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ವಿರುದ್ಧ ಎರಡು ದಿನಗಳಿಂದ ಸಹಿ ಚಳವಳಿ ನಡೆಸಿದ ನಿವಾಸಿ ಕ್ಷೇಮಾಭಿವೃದ್ಧಿ ಸಂಘಟನೆಗಳು ಹಾಗೂ ಇತರರು, ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ಬುಧವಾರ ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಅವರನ್ನು ಭೇಟಿ ಮಾಡಿದ ಸ್ಥಳೀಯ ನಿವಾಸಿಗಳು, ಪ್ರಕರಣವನ್ನು ಕ್ಲೋಸ್ ಮಾಡುವಂತೆ ಒತ್ತಾಯಿಸಿದರು.

ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ ಪತ್ರದಲ್ಲಿ, ನಾಗರಿಕರು ಮತ್ತು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್, ಆಧಾರರಹಿತ ಹಾಗೂ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಫ್ಐಆರ್ ದಾಖಲಿಸಲಾಗುತ್ತದೆ. ಹೋರಾಟ ಮಾಡುವುದು ನಮ್ಮ ಸಾಂವಿಧಾನಿಕ ಹಕ್ಕು. ನಮಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.

ಪತ್ರದಲ್ಲಿ 70 ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ ಸಹಿ ಮಾಡಿರುವುದು ಕಂಡು ಬಂದಿದೆ. ನಾಗರಿಕರ ಮೇಲಿನ ಆಧಾರರಹಿತ ಆರೋಪಗಳನ್ನು ಹಿಂಪಡೆಯಬೇಕು ಮತ್ತು ಪ್ರಕರಣವನ್ನು ಕೂಡಲೇ ಮುಚ್ಚಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಪ್ರಕರಣದಲ್ಲಿ ಕಾನೂನು ದುರುಪಯೋಗದ ಆಗಿರುವುದರ ಬಗ್ಗೆ ತನಿಖೆಗೂ ಒತ್ತಾಯಿಸಲಾಗಿದೆ.

ಭವಿಷ್ಯದ ಮಕ್ಕಳಿಗೆ ಆರೋಗ್ಯಕರ ನಗರವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಮೌನವಾದ ನಡಿಗೆಯಂತಹ ಹೋರಾಟದಿಂದ ಯಾರಿಗೂ ಹಾನಿಯಾಗುವುದಿಲ್ಲ. ನಾವು ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದ್ದಾರೆ,

ಪತ್ರವನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರತಾಪ್ ರೆಡ್ಡಿಯವರು, ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಹಲಸೂರು ಠಾಣೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com