
ಮೈಸೂರು: ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸಿಸುತ್ತಿರುವ ಎಲ್ಲಾ ಆದಿವಾಸಿಗಳಿಗೆ ಮನೆಗಳನ್ನು ಒದಗಿಸಿ ಮತ್ತು ಈ ಪ್ರದೇಶದ ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಆಸ್ಕರ್ ವಿಜೇತ ಸಾಕ್ಷ್ಯಚಿತ್ರ - ದಿ ಎಲಿಫೆಂಟ್ ವಿಸ್ಪರರ್ಸ್‌ನ ತಾರೆ ಬೆಳ್ಳಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭಾನುವಾರ ಮನವಿ ಮಾಡಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದ ಬಳಿಕ ಮೋದಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಆನೆ ಶಿಬಿರಕ್ಕೆ ಭೇಟಿ ನೀಡಿದರು.
ಈ ವೇಳೆ ಅನಾಥ ಆನೆಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಉದಾತ್ತ ಸೇವೆಗಾಗಿ ಅವರನ್ನು ಅಭಿನಂದಿಸಿದರು.
ಮೋದಿ ಅವರು ಆನೆ ಶಿಬಿರಕ್ಕೆ ಬಂದು ನಮ್ಮನ್ನು ಭೇಟಿ ಮಾಡಿ ಅಭಿನಂದಿಸಿದ್ದು ಖುಷಿ ತಂದಿದೆ. ಶಿಬಿರದಲ್ಲಿರುವ ಎಲ್ಲಾ ಆದಿವಾಸಿಗಳಿಗೆ ಮನೆ, ಉತ್ತಮ ರಸ್ತೆಗಳು ಮತ್ತು ಆದಿವಾಸಿಗಳ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವಂತೆ ಮೋದಿಯವರ ಬಳಿ ಮನವಿ ಮಾಡಿಕೊಂಡೆ. ಈ ವೇಳೆ ಪ್ರಧಾನಮಂತ್ರಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಸಹಾಯ ಪಡೆಯುವಂತೆ ತಿಳಿಸಿದರು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಮೋದಿಯವರು ಹೇಳಿದರು ಎಂದು ದಿ ಎಲಿಫೆಂಟ್ ವಿಸ್ಪರರ್ಸ್‌ನ ತಾರೆ ಬೆಳ್ಳಿ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಬರುವಂದೆ ಮೋದಿಯವರು ನಮ್ಮನ್ನು ಆಹ್ವಾನಿಸಿದ್ದಾರೆ. ಪ್ರಧಾನಮಂತ್ರಿಗಳು ನಮ್ಮ ಪಕ್ಕದಲ್ಲಿ ಕುಳಿತು ಭುಜದ ಮೇಲೆ ಕೈ ಹಾಕಿ ಮಾತನಾಡಿದ್ದು ರೋಮಾಂಚನಗೊಳ್ಳುವಂತೆ ಮಾಡಿತು. ಶಿಕ್ಷಣ ಪಡೆಯುತ್ತಿರುವ ನಮ್ಮ ಮಕ್ಕಳಿಗೆ ಲ್ಯಾಪ್ಟಾಪ್ ಗಳ ಒದಗಿಸುವಂತೆ ಮನವಿ ಮಾಡಿಕೊಂಡೆವು. ನಮ್ಮ ಬೇಡಿಕೆಗಳ ಪರಿಶೀಲಿಸುವುದಾಗಿ ಮೋದಿಯವರು ಭರವಸೆ ನೀಡಿದ್ದಾರೆಂದು ಬೊಮ್ಮನ್ ಅವರು ಹೇಳಿದ್ದಾರೆ.
ತಮ್ಮ ಸಾಧನೆಯ ಶ್ರೇಯಸ್ಸು ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಆನೆ ಮರಿಗೆ ಸಲ್ಲಬೇಕು. ಇದು ಅರಣ್ಯ ಇಲಾಖೆ ಮತ್ತು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೂ ಸಂದ ಮನ್ನಣೆಯಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಸಾಕ್ಷ್ಯಚಿತ್ರದಲ್ಲಿ ಆನೆ ಪಾಲಕರಾಗಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿಗಳು ಕಾಣಿಸಿಕೊಂಡಿದ್ದರು
Advertisement