ಲಿಂಗಾಯತ ಸಿಎಂ ಹೇಳಿಕೆ: ಸಿದ್ದರಾಮಯ್ಯ ವಿರುದ್ದ ಮಠಾಧೀಶರ ಕಿಡಿ, ಸರ್ಟಿಫಿಕೇಟ್ ಅಗತ್ಯ ಇಲ್ಲ ಎಂದ ಬೊಮ್ಮಾಯಿ

ಲಿಂಗಾಯತ ಸಿಎಂ ಎಂಬ ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದಲ್ಲಿ ಇದೀಗ ಮಠಾಧೀಶರ ಪ್ರವೇಶವಾಗಿದೆ.
ಬೊಮ್ಮಾಯಿ-ಸಿದ್ದರಾಮಯ್ಯ
ಬೊಮ್ಮಾಯಿ-ಸಿದ್ದರಾಮಯ್ಯ
Updated on

ಬೆಂಗಳೂರು: ಲಿಂಗಾಯತ ಸಿಎಂ ಎಂಬ ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದಲ್ಲಿ ಇದೀಗ ಮಠಾಧೀಶರ ಪ್ರವೇಶವಾಗಿದೆ.

ಹೌದು.. ಸಿದ್ದರಾಮಯ್ಯ ಅವರ ಲಿಂಗಾಯತ ಸಿಎಂ ಹೇಳಿಕೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯಶ್ರೀಗಳು ವಿರೋಧ ವ್ಯಕ್ತಪಡಿಸಿದ್ದು, ಇಡೀ ಸಮುದಾಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಹಿಂಪಡೆಯಲಿ ಎಂದು ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಶ್ರೀಗಳು, ಯಾವ ಹಿನ್ನೆಲೆಯಲ್ಲಿ ಹಾಗೇ ಮಾತಾಡಿದ್ದಾರೋ‌ ಗೊತ್ತಿಲ್ಲ. ಲಿಂಗಾಯತರು ಎಲ್ಲರೂ ಕೆಟ್ಟವರು ಆಗಿರಲ್ಲ. ಯಾರೋ ಒಬ್ಬರು ಭ್ರಷ್ಟಾಚಾರ ಮಾಡಿದ ಕಾರಣ ಇಡೀ ಲಿಂಗಾಯತರ ಮೇಲೆ ಟೀಕೆ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಗತವಾಗಿ ಟೀಕೆ ಮಾಡಲಿ. ಆದರೆ ಸಮುದಾಯಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದರು.

ಅಂತೆಯೇ ಸಿದ್ದರಾಮಯ್ಯ ಅವರು ಹೇಳಿಕೆ ಪುನರ್ ಪರಿಶೀಲಿಸಿ ವಾಪಸ್ ಪಡೆಯಬೇಕು. ಸಮಾಜಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಎಲ್ಲಾ ಸಮುದಾಯದವರು ಸಿಎಂ ಆಗಿದ್ದಾರೆ. ಸಿಎಂ ಆಗಿದ್ದಾಗ ತಪ್ಪು-ಒಪ್ಪು ಮಾಡಿದ್ದಾರೆ. ಎಸ್.ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ಜೆ.ಹೆಚ್.ಪಟೇಲ್​ರಿಂದ ದೇಶ ಮೆಚ್ಚುವ ಆಡಳಿತ ಮಾಡಿದ್ದಾರೆ. ಯಾರೋ ಓರ್ವ ಲಿಂಗಾಯತ‌ ಸಿಎಂ ತಪ್ಪು ಮಾಡಿದರೆಂಬ ಕಾರಣಕ್ಕೆ ಇಡೀ ಸಮುದಾಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಸಿದ್ಧರಾಮಯ್ಯ ಬಗ್ಗೆ ನಮಗೆ ಅಪಾರ ಗೌರವ ಇದೆ ಎಂದು ಹೇಳಿದರು.

ಸರ್ಟಿಫಿಕೇಟ್ ಅಗತ್ಯ ಇಲ್ಲ ಎಂದ ಬೊಮ್ಮಾಯಿ
ಇದೇ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬೊಮ್ಮಾಯಿ, ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯವರು ಭ್ರಷ್ಟರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಅವರು, “ಸಿದ್ದರಾಮಯ್ಯನವರೇ ಕರ್ನಾಟಕ ಕಂಡಂತ ಭ್ರಷ್ಟ ಸರ್ಕಾರ ನಿಮ್ಮದು. ಲೋಕಾಯುಕ್ತವನ್ನು (Lokayukta) ರದ್ದು ಮಾಡಿ ಎಸಿಬಿ ರಚನೆ ಮಾಡಿ ಎಲ್ಲ ಹಗರಣ ಮುಚ್ಚಿ ಹಾಕುವ ಕೆಲಸ ಮಾಡಿದ್ದೀರಿ” ಎಂದು ಹೇಳಿದರು.

“ಸಿದ್ದರಾಮಯ್ಯನವರೇ ಕರ್ನಾಟಕ ಕಂಡಂತ ಭ್ರಷ್ಟ ಸರ್ಕಾರ ನಿಮ್ಮದು. 2013-18 ರವರೆಗೆ ಭ್ರಷ್ಟ ಸರ್ಕಾರ ನಡೆಸಿದವರು ನೀವು. ಬಿಡಿಎಯಲ್ಲಿ ರಿಡೂ ಭ್ರಷ್ಟಾಚಾರ, ಸಣ್ಣ ಹಾಗೂ ಬೃಹತ್ ನಿರಾವರಿ, ಎಸ್ಸಿ ಎಸ್ಟಿ ಮಕ್ಕಳಿಗೆ ನೀಡುವ ಹಾಸಿಗೆ ದಿಂಬಿನಲ್ಲಿಯೂ ಬಿಡಲಿಲ್ಲ. ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರೀಯ ‌ಮಾಡಿದ ಖ್ಯಾತಿ ನಿಮ್ಮದು. ಎಸಿಬಿ ಮಾಡಿ ಎಲ್ಲ ಹಗರಣ ಮುಚ್ಚಿ ಹಾಕುವ ಕೆಲಸ ಮಾಡಿದಿರಿ, ಭ್ರಷ್ಟ ಅಧಿಕಾರಿ ಹಾಗೂ ರಾಜಕರಣಿಗಳನ್ನು ರಕ್ಷಣೆ ಮಾಡಿದ್ದೀರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್​ಗೆ ನೈತಿಕ ಅಧಿಕಾರ ಇಲ್ಲ. ನಿಮ್ಮಿಂದ ಸರ್ಟಿಪಿಕೆಟ್ ಪಡೆಯುವ ಅವಶ್ಯಕತೆಯಿಲ್ಲ” ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com