

ಬೆಂಗಳೂರು: ಕ್ಯಾಬ್ ನಲ್ಲಿ ಹೋಗುತ್ತಿದ್ದಾಗ ಮಹಿಳೆ ಫೋನಿನಲ್ಲಿ ಮಾತನಾಡುತ್ತಿದ್ದ ವೈಯಕ್ತಿಯ ವಿಚಾರಗಳನ್ನು ಆಲಿಸಿ, ಬ್ಲ್ಯಾಕ್ ಮೇಲ್ ಮಾಡಿ ರೂ.80 ಲಕ್ಷ ಮೌಲ್ಯದ ಚಿನ್ನ, ನಗದು ಸುಲಿಗೆ ಮಾಡಿದ್ದ ಚಾಲಕನೊಬ್ಬನನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಹೆಸರಘಟ್ಟ ಸಮೀಪದ ತೋಟದಗುಡ್ಡ ಹಳ್ಳಿ ನಿವಾಸಿ ಕಿರಣ್ ಕುಮಾರ್ ಬಂಧಿತ ಆರೋಪಿ. ಈತ ಮಹಿಳೆಯಿಂದ ರೂ.60 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ.20 ಲಕ್ಷ ಹಣವನ್ನು ಸುಲಿಗೆ ಮಾಡಿದ್ದ.
ಸಂತ್ರಸ್ತ ಮಹಿಳೆ ಇಂದಿರಾ ನಗರದಲ್ಲಿ ಕುಟುಂಬದ ಜೊತೆ ನೆಲೆಸಿದ್ದಾರೆ. 2022ರ ನವೆಂಬರ್ ನಲ್ಲಿ ಕೆಲಸದ ನಿಮಿತ್ತ ಬಾಣಸವಾಡಿಗೆ ತೆರಳಲು ಉಬರ್ ಕ್ಯಾಬ್ ನ್ನು ಬುಕ್ ಮಾಡಿದ್ದರು. ಬಾಡಿಗೆಗೆ ಬಂದ ಆರೋಪಿ ಕಿರಣ್, ಪೂರ್ವ ನಿಗದಿಯಂತೆ ಬಾಣಸವಾಡಿಗೆ ಸಂತ್ರಸ್ತ ಮಹಿಳೆಯನ್ನು ಡ್ರಾಪ್ ಮಾಡಿದ್ದ. ಪ್ರಯಾಣದ ವೇಳೆ ಸುಮನ್ ಹೆಸರಿನ ಬಾಲ್ಯದ ಸ್ನೇಹಿತನ ಜೊತೆಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ತಮ್ಮ ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ಭಾವುಕರಾಗಿದ್ದರು. ಈ ಮಾತುಗಳನ್ನು ಆಲಿಸಿದ ಆರೋಪಿ, ಪ್ರಯಾಣ ಮುಗಿದ ಬಳಿಕ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಂಡಿದ್ದಾನೆ. ಕೆಲ ದಿನಗಳ ಬಳಿಕ ಬಾಲ್ಯದ ಸ್ನೇಹಿತನ ಸುಮನ್ ಹೆಸರಿನಲ್ಲಿ ಸಂತ್ರಸ್ತ ಮಹಿಳೆಗೆ ಸಂದೇಶವನ್ನು ಕಳುಹಿಸಿದ್ದಾನೆ. ಹೊಸ ನಂಬರ್ ಎಂದು ನಂಬಿಸಿದ್ದಾನೆ. ಹೀಗೆ ಮಹಿಳೆಯನ್ನು ನಂಬಿಸಿದ್ದ ಆರೋಪಿ, ಚಾಟಿಂಗ್ ಮುಂದುವರೆಸಿದ್ದ.
ಕೆಲ ದಿನಗಳ ಬಳಿಕ ಹಣದ ಅವಶ್ಯಕತೆ ಇದೆ ಎಂದು ಹೇಳಿ ರೂ.20 ಲಕ್ಷ ಹಣವನ್ನು ವಸೂಲಿ ಮಾಡಿದ್ದಾನೆ. ಬಳಿಕ ರೂ.60 ಲಕ್ಷ ಮೌಲ್ಯದ ಚಿನ್ನಾಭರಣವನ್ನೂ ಪಡೆದುಕೊಂಡಿದ್ದಾನೆ. ಇದಾದ ಬಳಿಕ ಮತ್ತೆ ಹಣ ಬೇಕೆಂದು ಕೇಳಿದ್ದಾನೆ. ಈ ವೇಳೆ ಮಹಿಳೆ ನಿರಾಕರಿಸಿದ್ದಾಳೆ. ಆಗ ಮೋಸದ ಕೃತ್ಯ ಬಯಲಾಗಿದೆ.
ಬಳಿಕ ತನ್ನ ಮುಖವಾಡ ಕಳಚಿದ ಆರೋಪಿ, ಹಣ ನೀಡದೇ ಹೋದರೆ, ನನ್ನೊಂದಿಗೆ ಚಾಟಿಂಗ್ ಮಾಡಿರುವುದನ್ನು ಕುಟುಂಬದವರಿಗೆ ಹೇಳುತ್ತೇನೆ. ಮಾತುಕತೆಯ ಆಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆಂದು ಬೆದರಿಗೆ ಹಾಕಿದ್ದಾನೆ. ಈ ವೇಳೆ ಹೆದರಿದ ಮಹಿಳೆ ಮತ್ತೆ ಹಣವನ್ನು ನೀಡಿದ್ದಾಳೆ. ಆರೋಪಿ ಪದೇ ಪದೇ ಹಿಂಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಹಿಂಸೆ ತಾಳಲಾರದೆ ಪತಿ ಬಳಿ ನಡೆದದ್ದನ್ನು ಹೇಳಿಕೊಂಡಿದ್ದಾರೆ. ವಿಚಾರ ತಿಳಿಸಿದ ಮಹಿಳೆಯ ಪತಿ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದು, ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement