ಬೆಂಗಳೂರು: ಅಗ್ನಿಪಥ್ ಯೋಜನೆಯಡಿ ಬೆಂಗಳೂರಿನ ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್‌ನಲ್ಲಿ(ಉತ್ತರ) ಮೊದಲ ಬ್ಯಾಚಿನ 113 ಅಗ್ನಿವೀರರು ತರಬೇತಿ ಪೂರ್ಣಗೊಳಿಸಿದ್ದಾರೆ.
ಕೇಂದ್ರ ಸಶಸ್ತ್ರ ಪಡೆಗಳ ಮೂರು ಸೇವೆಗಳಿಗೆ ಸೈನಿಕರ ನೇಮಕಾತಿಗಾಗಿ 2022ರ ಜೂನ್ 16ರಂದು ಭಾರತ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಅನುಮೋದನೆಗೊಳಿಸಿತ್ತು.
ಯೋಜನೆಯ ಭಾಗವಾಗಿ ಇದೇ ವರ್ಷ ಜನವರಿ 2023 ರಿಂದ ಪ್ರಾರಂಭವಾದ ತರಬೇತಿಯಲ್ಲಿ ಆಗಸ್ಟ್ 5 ರ ವರೆಗೆ 85 ಅಗ್ನಿವೀರರು (ಎಂಟಿ) ಉತ್ತೀರ್ಣರಾಗಿ ಹೊರಹೊಮ್ಮಿದ್ದಾರೆ.
ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್(ಉತ್ತರ)- 1 ಎಟಿಸಿಯ ಕಮಾಂಡೆಂಟ್, ಬ್ರಿಗೇಡಿಯರ್ ತೇಜ್‌ಪಾಲ್ ಸಿಂಗ್ ಮಾನ್ ಶನಿವಾರ ಅಗ್ನಿವೀರರು ತರಬೇತಿ ಮತ್ತು ಉತ್ತೀರ್ಣರಾದವರ ಪರೇಡ್ ವೀಕ್ಷಿಸಿದರು.
ಇದೇ ವೇಳೆ ರಾಷ್ಟ್ರ ಸೇವೆಗಾಗಿ ಸೇನೆ ಸೇರಲು ಅಸಂಖ್ಯಾತ ಧೀರರನ್ನು ಪ್ರೋತ್ಸಾಹಿಸಿದ ಎಲ್ಲಾ ಪೋಷಕರಿಗೆ ಅವರ ಉದಾತ್ತತೆಯನ್ನು ಗುರುತಿಸುವುದರ ಸಂಕೇತವಾಗಿ ಭಾರತೀಯ ಸೇನೆಯ ಪ್ರತಿಷ್ಠಿತ ಗೌರವ ಪದಕವನ್ನು ನೀಡಿ ಗೌರವಿಸಲಾಯಿತು. ಬಳಿಕ ಪ್ರತಿಭಾವಂತ ಅಗ್ನಿವೀರರಿಗೆ ಇದೇ ವೇಳೆ ಪ್ರಶಸ್ತಿ ಫಲಕಗಳನ್ನು ವಿತರಿಸಲಾಯಿತು. ಅಕ್ಷಯ ಧೀರೆ ಹಾಗೂ ನಾಯ್ಕ ಯಶವಂತ್ ಗಾಡಗೆ ವಿಕ್ಟೋರಿಯಾ ಕ್ರಾಸ್ ಮೆಡಲ್ ಪ್ರದಾನ ಮಾಡಲಾಯಿತು.
ಲೆಫ್ಟಿನೆಂಟ್ ಜನರಲ್ ಬಿಕೆ ರೆಪ್ಸ್ವಾಲ್ ಅವರು ಮಾತನಾಡಿ, ಕಠಿಣ ಪರಿಶ್ರಮ, ಸಮರ್ಪಣೆ, ಉತ್ಸಾಹದಿಂದ ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಗ್ನಿವೀರ್ ಮೊದಲ ಬ್ಯಾಚ್ 31 ವಾರಗಳ ಕಠಿಣ ತರಬೇತಿಯ ನಂತರ ಅಂತಿಮವಾಗಿ ಉತ್ತೀರ್ಣರಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕ್ಷಣ ಸಶಸ್ತ್ರ ಪಡೆಗಳ ಇತಿಹಾಸದಲ್ಲಿ ಸುವರ್ಣ ಪುಟದಲ್ಲಿ ದಾಖಲಾಗಿದೆ. ನಮ್ಮ ರಾಷ್ಟ್ರಕ್ಕೆ ಅತ್ಯಂತ ಸಮರ್ಪಣೆ, ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ಸೇವೆ ಮಾಡಲು ಪ್ರಮಾಣ ವಚನ ಸ್ವೀಕರಿಸಬೇಕು. ದೇಶಕ್ಕಾಗಿ ತ್ಯಾಗ ಮಾಡಲು ಸದಾಕಾಲ ಸಿದ್ಧರಾಗಿರಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿರುವ ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್ (ಉತ್ತರ) ಭಾರತೀಯ ಸೇನೆಗಾಗಿ ಅನಿಮಲ್ಸ್ ಮತ್ತು ಸ್ಟೋರ್ ಹ್ಯಾಂಡ್ಲರ್‌ಗಳು, ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ ಡ್ರೈವರ್‌ಗಳು ಸೇರಿದಂತೆ ವಿವಿಧ ತರಬೇತಿ ನೀಡುವ ಪ್ರಮುಖ ಸಂಸ್ಥೆಯಾಗಿದೆ.
Advertisement