ಕಾರಿನಲ್ಲಿ ನಾಯಿ ಲಾಕ್ ಪ್ರಕರಣ: ಮಗ ಮಾನಸಿಕ ಅಸ್ವಸ್ಥ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ; ಕಾರು ಮಾಲೀಕನ ಪೋಷಕರು

ಉದ್ದೇಶ ಪೂರ್ವಕವಾಗಿ ನಾಯಿಯನ್ನು ಕಾರಿನಲ್ಲಿ ಬಿಟ್ಟು ಹೋಗಿಲ್ಲ, ಮಗ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಕಾರು ಮಾಲೀಕ ಕಸ್ತೂರಿ ನಗರದ ನಿವಾಸಿ ವಿಕ್ರಮ್ ರಾಮದಾಸ್ ಲಿಂಗೇಶ್ವರ್ ಅವರ ಪೋಷಕರು ಹೇಳಿದ್ದಾರೆ.
ಚಾರ್ಲಿ ಅನಿಮಲ್ ರೆಸ್ಕ್ಯೂ ಸೆಂಟರ್‌ನಲ್ಲಿ ಗ್ರೇಟ್ ಡೇನ್ ರಾವಣ ಚೇತರಿಸಿಕೊಳ್ಳುತ್ತಿರುವುದು.
ಚಾರ್ಲಿ ಅನಿಮಲ್ ರೆಸ್ಕ್ಯೂ ಸೆಂಟರ್‌ನಲ್ಲಿ ಗ್ರೇಟ್ ಡೇನ್ ರಾವಣ ಚೇತರಿಸಿಕೊಳ್ಳುತ್ತಿರುವುದು.

ಬೆಂಗಳೂರು: ಉದ್ದೇಶ ಪೂರ್ವಕವಾಗಿ ನಾಯಿಯನ್ನು ಕಾರಿನಲ್ಲಿ ಬಿಟ್ಟು ಹೋಗಿಲ್ಲ, ಮಗ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಕಾರು ಮಾಲೀಕ ಕಸ್ತೂರಿ ನಗರದ ನಿವಾಸಿ ವಿಕ್ರಮ್ ರಾಮದಾಸ್ ಲಿಂಗೇಶ್ವರ್ ಅವರ ಪೋಷಕರು ಹೇಳಿದ್ದಾರೆ.

ಬುಧವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ರೇಟ್ ಡೇನ್ ನಾಯಿಯನ್ನು ಕಾರಿನೊಳಗೆ ಕೂಡಿ ಹಾಕಿ ತಪ್ಪಾದ ಪಾರ್ಕಿಂಗ್ ಲೇನ್‌ನಲ್ಲಿ ಬಿಟ್ಟು ಹೋಗಿದ್ದ ಘಟನೆ ವರದಿಯಾಗಿತ್ತು.

ಕಾರಿನಲ್ಲಿ ಸಿಲುಕಿದ್ದ ನಾಯಿ ಉಸಿರಾಡಲು ಏದುಸಿರು ಬಿಡುತ್ತಿರುವುದನ್ನು ಕಂಡ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ಸಿಬ್ಬಂದಿ ಕಾಲಿನ ಗಾಜುಗಳನ್ನು ಒಡೆದು, ನಾಯಿಯನ್ನು ರಕ್ಷಣೆ ಮಾಡಿದ್ದರು. ಈ ಘಟನೆ ಪ್ರಾಣಿಪ್ರಿಯರ ಕಣ್ಣುಕೆಂಪಗಾಗುವಂತೆ ಮಾಡಿತ್ತು. ಘಟನೆ ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದ ಅಧಿಕಾರಿಗಳು ಕಾರನ್ನು ಪಾರ್ಕ್ ಮಾಡಿದ್ದ ವ್ಯಕ್ತಿಯನ್ನು ಗುರ್ತಿಸಿ, ಠಾಣೆಗೆ ಕರೆದೊಯ್ದಿದ್ದರು.

ಬಳಿಕ ವ್ಯಕ್ತಿಯ ವಿರುದ್ಧ ಐಪಿಸಿ 429 (ಜಾನುವಾರುಗಳನ್ನು ಕೊಲ್ಲುವುದು ಮತ್ತು ಅಂಗವಿಕಲಗೊಳಿಸುವುದು) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ರ ಅಡಿಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ್ದರು.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿಕ್ರಮ್ ಅವರ ಪೋಷಕರು, ಇದು ಕ್ರೌರ್ಯದ ಅಥವಾ ಸಂವೇದನಾಶೀಲತೆಯ ಕೃತ್ಯವಲ್ಲ. ಮಗ ಮಾನಸಿಕ ಅಸ್ವಸ್ಥನಾಗಿದ್ದಾನೆಂದು ಹೇಳಿದ್ದಾರೆ.

ವಿಕ್ರಮ್'ಗೆ 31 ವರ್ಷವಾಗಿದ್ದು, 5 ವರ್ಷದ ಅವಿವಾ ಎಂಬ ಮಗಳಿದ್ದಾಳೆ. ಪತ್ನಿ ವೇದಾ ಗೃಹಿಣಿಯಾಗಿದ್ದಾರೆ. ಕುಟುಂಬ ಕಸ್ತೂರಿ ನಗರದಲ್ಲಿ ನೆಲೆಸಿದ್ದಾರೆ. ವಿಕ್ರಮ್ ಇನ್‌ಲೈನ್ ಹಾಕಿ ಸ್ಕೇಟಿಂಗ್‌ನಲ್ಲಿ ಪರಿಣತಿ ಹೊಂದಿದ್ದು, ಬೆಂಗಳೂರು ಜಿಲ್ಲಾ ರೋಲರ್ ಸ್ಪೋರ್ಟ್ಸ್ ಅಸೋಸಿಯೇಷನ್ (BRDSA) ಉಪಾಧ್ಯಕ್ಷರಾಗಿದ್ದಾರೆಂದು ತಿಳಿದುಬಂದಿದೆ.

ನಿರ್ಮಾಣ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ವಿಕ್ರಮ್ ಅವರ ತಂದೆ ಲಿಂಗೇಶ್ವರ್ ಅವರು, ಘಟನೆಯಿಂದಾಗಿ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ.

ಮಗನ ಮಾನಸಿಕ ರೋಗ 6 ದಿನಗಳ ಹಿಂದೆ ಪ್ರಾರಂಭವಾಗಿತ್ತು. ಕಳೆದ ವರ್ಷ ಕೂಡ ಇದೇ ರೀತಿಯ ಸಮಸ್ಯೆ ಎದುರಿಸಿದ್ದ. ಆದರೆ, ಆಗ 2-3 ದಿನಗಳವರೆಗೆ ಮಾತ್ರ ಇತ್ತು. ಬಳಿಕ  ಡಾ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಈ ಬಾರಿ ತೀವ್ರ ಮಟ್ಟಕ್ಕೆ ಹೋಗಿದೆ. 6 ದಿನಗಳಿಂದ 10 ಮಂದಿ ನನ್ನನ್ನು ಹತ್ಯೆ ಮಾಡಲು ಯತ್ನ ನಡೆಸುತ್ತಿದ್ದಾರೆಂದು ಹೇಳುತ್ತಿದ್ದ. ಈ ಬಗ್ಗೆ 6 ಬಾರಿ ಪೊಲೀಸರಿಗೆ ದೂರು ನೀಡಿದ್ದ. ಹೊಯ್ಸಳ ಪೊಲೀಸರು 2 ಬಾರಿ ಮನೆಗೆ ಬಂದಿದ್ದಾರೆ. ಈ ವೇಳೆ ಹತ್ತಿರದ ಸಂಬಂಧಿಕರೇ ನನ್ನನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದ.

ಸಾಕು ನಾಯಿ 'ರಾವಣ'ನನ್ನು ಸಾಯಿಸುವ ಆಲೋಚನೆ ಕೂಡ ಆತನಿಗೆ ಬರಲು ಸಾಧ್ಯವಿಲ್ಲ. ನಾಯಿಯೊಂದಿಗೆ ಪ್ರತೀನಿತ್ಯ ಸಾಕಷ್ಟು ಸಮಯ ಕಳೆಯುತ್ತಿದ್ದ. ವಿಮಾನ ನಿಲ್ದಾಣದಲ್ಲಿ ನಾಯಿಯನ್ನು ರಕ್ಷಣೆ ಮಾಡಿದ್ದಕ್ಕೆ ಹಾಗೂ ಮಗನನ್ನು ಬಂಧಿಸಿದ್ದಕ್ಕೆ ಸಿಐಎಸ್‌ಎಫ್‌ಗೆ ತುಂಬಾ ಕೃತಜ್ಞರಾಗಿರುತ್ತೇವೆ. ಮಗ ಮುಂಬೈಗೆ ಹೋಗುತ್ತಿದ್ದಾನೆಂಬ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ. ಕಾಲ್ಪನಿಕ ಹಂತಕರಿಂದ ತಪ್ಪಿಸಿಕೊಳ್ಳಲು ಮುಂಬೈಗೆ ಹೋಗುತ್ತಿದ್ದ ಎಂದೆನಿಸುತ್ತದೆ. ವಿಮಾನ ನಿಲ್ದಾಣಕ್ಕೆ ಹೋದಾಗ ರಾವಣನನ್ನು ಯಾವ ರೀತಿ ಜೊತೆಗೆ ಕರೆದುಕೊಂಡು ಹೋಗಬೇಕೆಂಬುದು ಆತನಿಗೆ ತಿಳಿದಿರಲಿಲ್ಲ ಇರಬೇಕು. ಹೀಗಾಗಿ ಕಾರಿನಲ್ಲೇ ಬಿಟ್ಟು ಹೋಗಿದ್ದಾನೆಂದು ತಿಳಿಸಿದ್ದಾರೆ.

ವಿಕ್ರಮ್ ಅವರ ತಾಯಿ ಕಲ್ಪನಾ ಅವರು ಮಾತನಾಡಿ, ಕಳೆದ ನಾಲ್ಕು ದಿನಗಳಿಂದ, ಮಗ ನಾಯಿಯನ್ನು ಕಾರಿನಲ್ಲಿ ಇರಿಸಿಕೊಂಡು ಎಡೆಬಿಡದೆ ಸುತ್ತಾಡುತ್ತಿದ್ದ. ಹೊರಗೆ ಕಾಲಿಟ್ಟರೆ ಎಲ್ಲಿ ತನ್ನನ್ನು ಹತ್ಯೆ ಮಾಡುತ್ತಾರೆಂಬ ಭಯದಲ್ಲಿ ನಾಯಿಯನ್ನು ತನ್ನೊಂದಿಗೇ ಇಟ್ಟುಕೊಳ್ಳುತ್ತಿದ್ದ. ಈ ವೇಳೆ ಇಬ್ಬರೂ ಊಟ, ನಿದ್ರೆ ಮಾಡಿಲ್ಲ. ಹೀಗಾಗಿಯೇ ನಾಯಿ (ರಾವಣ) ತೆಳ್ಳಗಾಗಿದೆ. ರಾವಣ ಗ್ರೇಟ್ ಡೇನ್ ನಾಯಿಯಾಗಿದ್ದು, ಈ ನಾಯಿಗೆ ಸಾಕಷ್ಟು ಆಹಾರ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮಗನನ್ನು ಕರೆದುಕೊಂಡು ಬರಲು ಠಾಣೆಗೆ ಹೋದಾಗ, ನನ್ನ ಮಗ ನನ್ನನ್ನು ತಾತ ಎಂದು ಗುರ್ತಿಸಿದ. ವಿಕ್ರಮ್ ಅದ್ಭುತ ಕ್ರೀಡಾಪಟು. ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲೂ ಆಡಿದ್ದಾನೆ. ಇನ್‌ಲೈನ್ ಹಾಕಿಯಿಂದ ನಿವೃತ್ತಿ ಘೋಷಿಸಿದಾಗ, ಅವನನ್ನು BRDSA ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಕರ್ನಾಟಕದಿಂದ ಕನಿಷ್ಠ 25 ಕ್ರೀಡಾಪಟುಗಳನ್ನು ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಕಳುಹಿಸುವಲ್ಲಿ ವಿಕ್ರಮ್ ಪ್ರಮುಖ ಪಾತ್ರ ವಹಿಸಿದ್ದಾನೆ. ಇದೀಗ ಅವನಿಗೆ ಹೆಚ್ಚಿನ ಚಿಕಿತ್ಸೆಗಾಗಿ ನಂದಿನಿ ಲೇಔಟ್‌ನಲ್ಲಿರುವ ಸ್ಪಂದನಾ ಆಸ್ಪತ್ರೆ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಲಿಂಗೇಶ್ವರ್ ಅವರು ಮಾಹಿತಿ ನೀಡಿದ್ದಾರೆ.

ಈ ನಡುವೆ ನಾಯಿ ರಾವಣನಿಗೆ ಚಾರ್ಲಿ ಅನಿಮಲ್ ರೆಸ್ಕ್ಯೂ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ರಾವಣ ಉತ್ತಮವಾಗಿ ಸ್ಪಂದಿಸುತ್ತಿದ್ದಾನೆಂದು ಮ್ಯಾನೇಜರ್ ಆರ್‌ಪಿ ಕೀರ್ತನ್ ಅವರು ಹೇಳಿದ್ದಾರೆ.

ಗಾಳಿ ಇಲ್ಲದ ಕಾರಣ ಕಾರಿನಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೆ ನರಳಿದೆ. ಹೀಗಾಗಿ ಆರೋಗ್ಯ ಸ್ಥಿತಿ ಇನ್ನೂ ದುರ್ಬಲವಾಗಿದೆ. ಆದರೆ, ನಿನ್ನೆಗಿಂತಲೂ ಆರೋಗ್ಯ ಮಟ್ಟ ಶೇ.40ರಷ್ಟು ಸುಧಾರಿಸಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಹೇಳಲು ಸಾಧ್ಯವಿಲ್ಲ. ಆದರೆ, ಚೇತರಿಕೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com