ಬಿಬಿಎಂಪಿ ಚುನಾವಣೆಗೂ ಮುನ್ನ ಬೆಂಗಳೂರು ಶಾಸಕರೊಂದಿಗೆ ಸಿಎಂ ಸಭೆ: ಬ್ರ್ಯಾಂಡ್ ಬೆಂಗಳೂರು, ಮೂಲಸೌಕರ್ಯ ಕುರಿತು ಚರ್ಚೆ

ಲೋಕಸಭಾ ಚುನಾವಣೆ ಜೊತೆಗೆ ಮುಂದಿನ ಡಿಸೆಂಬರ್ ನಲ್ಲಿ ಬಿಬಿಎಂಪಿ ಚುನಾವಣೆ ನಿಗದಿಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಸಭೆ ನಡೆಸಿದರು.
ಶಾಸಕರೊಂದಿಗೆ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ
ಶಾಸಕರೊಂದಿಗೆ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಲೋಕಸಭಾ ಚುನಾವಣೆ ಜೊತೆಗೆ ಮುಂದಿನ ಡಿಸೆಂಬರ್ ನಲ್ಲಿ ಬಿಬಿಎಂಪಿ ಚುನಾವಣೆ ನಿಗದಿಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಸಭೆ ನಡೆಸಿದರು.

ಸಭೆಯಲ್ಲಿ ಬ್ರಾಂಡ್ ಬೆಂಗಳೂರು, ಸಂಚಾರ ದಟ್ಟಣೆ, ಸುರಂಗ ರಸ್ತೆಗಳು, ಮೂಲ ಸೌಕರ್ಯ, ನೀರು ಸರಬರಾಜು, ಮಾದಕ ವಸ್ತುಗಳ ಹಾವಳಿ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಸಿದ್ದರಾಮಯ್ಯ ಅವರು ಪ್ರತೀ ಜಿಲ್ಲೆಯ ಪಕ್ಷದ ಶಾಸಕರಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಇದೂವರೆಗೆ 23 ಸಭೆಗಳನ್ನು ನಡೆಸಿದ್ದಾರೆ. ನಿನ್ನೆ ನಡೆದ ಸಭೆ ಕೂಡ ಇದರ ಭಾಗವಾಗಿದೆ.

ನಗರದ ಶಾಸಕರ ಜತೆಗೆ ಮುಖ್ಯಮಂತ್ರಿಗಳು ಬೆಳಗ್ಗೆ 11.15ರಿಂದ ಮಧ್ಯಾಹ್ನ 3ರವರೆಗೆ ಸಭೆ ನಡೆಸಿದರು. ಸಂಜೆ 4 ಗಂಟೆಯ ನಂತರ ಕೋಲಾರದ ಶಾಸಕರು, ನಂತರ ದಕ್ಷಿಣ ಕನ್ನಡದ ಶಾಸಕರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದರು.

ಬೆಂಗಳೂರು ನಗರದ ಶಾಸಕರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ ಸಂದರ್ಭದಲ್ಲಿ, ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು. ಈಜಿಪುರ ಮತ್ತು ಕೋರಮಂಗಲದ ಕೇಂದ್ರೀಯ ಭವನದ ನಡುವಿನ ಮೇಲ್ಸೇತುವೆ ಕಾಮಗಾರಿ ಕಳೆದ ನಾಲ್ಕೈದು ವರ್ಷಗಳಿಂದ ಸ್ಥಗಿತಗೊಂಡಿರುವುದನ್ನು ಪ್ರಸ್ತಾಪಿಸಿದರು.

ಅನೇಕ ಮನೆಗಳಿಗೆ ದೊಡ್ಡ ಮೊತ್ತದ ನೀರಿನ ಬಿಲ್'ಗಳು ಬಂದಿದ್ದು, ಬಾಕಿ ಇರುವ ಬಿಲ್‌ಗಳಲ್ಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ರಾಮಲಿಂಗಾ ರೆಡ್ಡಿಯವರು ಹೇಳಿದರು.

ಇದೇ ವೇಳೆ ಬಡವರಿಗೆ ನೆರವು ನೀಡಲು 600 ಚದರ ಅಡಿಗಿಂತ ಚಿಕ್ಕದಾದ ಮನೆಗಳಿಗೆ ಆರ್ಥಿಕ ನೆರವು ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಆನೇಕಲ್ ಶಾಸಕ ಬಿ.ಶಿವಣ್ಣ ಕಳೆದ ಕೆಲ ವರ್ಷಗಳಿಂದ ಕ್ಷಿಪ್ರ ನಗರೀಕರಣ ಕಂಡಿರುವ ತಮ್ಮ ಕ್ಷೇತ್ರಕ್ಕೆ ಕಾವೇರಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಶಿವಾಜಿನಗರ ಮತ್ತು ಪುಲಕೇಶಿನಗರ ನೀರಿನ ಕೊರತೆ ಎದುರಿಸುತ್ತಿದೆ ಎಂದು ಹೇಳಿದರು.

ಶಾಂತಿನಗರ ಶಾಸಕ ಎನ್.ಎ.ಹರೀಸ್ ಮಾತನಾಡಿ, ದಂಧೆಕೋರರ ವಿರುದ್ಧ ಪರಿಣಾಮಕಾರಿ ಕ್ರಮಕೈಗೊಳ್ಳುವ ಮೂಲಕ ನಗರದಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿಗಳು, ಲೋಕಸಭಾ ಚುನಾವಣೆ ಜೊತೆಗೆ ಮುಂದಿನ ಡಿಸೆಂಬರ್ ನಲ್ಲಿ ಬಿಬಿಎಂಪಿ ಚುನಾವಣೆ ನಿಗದಿಯಾಗಬಹುದು. ಹೀಗಾಗಿ ಇದಕ್ಕೂ ಮೊದಲೇ ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳ ತನಿಖೆ ಪೂರ್ಣಗೊಳಿಸಿ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡಬೇಕು. ಜೊತೆಗೆ ಹೊಸ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಸಬೇಕು ಎಂದು ಶಾಸಕರಿಗೆ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com