ಆನ್'ಲೈನ್ ಶಾಪಿಂಗ್ ವಂಚನೆ: ಗ್ರಾಹಕರಿಗೆ ನಕಲಿ ಉತ್ಪನ್ನ ಕೊಟ್ಟು ಪರಾರಿ, 21 ಮಂದಿ ಆರೋಪಿಗಳ ಬಂಧನ

ಆನ್'ಲೈನ್ ಇ– ಕಾಮರ್ಸ್ ಜಾಲತಾಣಗಳ ಗ್ರಾಹಕರಿಗೆ ನಕಲಿ ವಸ್ತುಗಳನ್ನು ಪೂರೈಸಿ ವಂಚಿಸುತ್ತಿದ್ದ ಜಾಲ ಭೇದಿಸಿರುವ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು, 21 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆನ್'ಲೈನ್ ಇ– ಕಾಮರ್ಸ್ ಜಾಲತಾಣಗಳ ಗ್ರಾಹಕರಿಗೆ ನಕಲಿ ವಸ್ತುಗಳನ್ನು ಪೂರೈಸಿ ವಂಚಿಸುತ್ತಿದ್ದ ಜಾಲ ಭೇದಿಸಿರುವ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು, 21 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಡೆಲಿವರಿ ಏಜೆನ್ಸಿಯೊಂದರ ಮಾಲೀಕ ವಂಚನೆ ಬಗ್ಗೆ ಇತ್ತೀಚೆಗೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಗುಜರಾತ್ ಹಾಗೂ ಮಧ್ಯಪ್ರದೇಶದ ನಿವಾಸಿಯಾಗಿರುವ 21 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರಿಂದ 7.50 ಲಕ್ಷ ನಗದು, 11 ಮೊಬೈಲ್‌, 3 ಲ್ಯಾಪ್‌ಟಾಪ್ ಹಾಗೂ ಹಾರ್ಡ್‌ಡಿಸ್ಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಐಟಿ ಕಾಯಿದೆಯ ಸೆಕ್ಷನ್ 66 ಸಿ ಮತ್ತು 66 ಡಿ (ವಂಚನೆ), ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುವ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಕಂಪನಿಗೆ ಆರೋಪಿಗಳು 3 ವರ್ಷಗಳಿಂದ ಸುಮಾರು 70 ಲಕ್ಷ ರೂ. ನಷ್ಟ ಉಂಟು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಮಿಶೋ ಆ್ಯಪ್‌ ಮೂಲಕ ವಸ್ತುಗಳನ್ನು ಆರ್ಡರ್‌ ಮಾಡುವ ಗ್ರಾಹಕರನ್ನೇ ಹೆಚ್ಚು ಟಾರ್ಗೆಟ್‌ ಮಾಡುತ್ತಿದ್ದರು. ‘ಇ–ಕಾಮರ್ಸ್ ಜಾಲತಾಣ ಮೂಲಕ ವಸ್ತುಗಳನ್ನು ಕಾಯ್ದಿರಿಸುತ್ತಿದ್ದ ಗ್ರಾಹಕರ ಮಾಹಿತಿ ಸರ್ವರ್‌ನಲ್ಲಿ ದಾಖಲಾಗುತ್ತಿತ್ತು. ಬಂಧಿತ ಆರೋಪಿಗಳ ಪೈಕಿ ಕೆಲವರು ಈ ಹಿಂದೆ ಮಿಶೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಗ್ರಾಹಕರ ಮಾಹಿತಿ ಕಳವು ಮಾಡುತ್ತಿದ್ದ ಇವರು, ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಈ ಮಾಹಿತಿ ನೆರವಿನಿಂದಲೇ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಸೌಲಭ್ಯದೊಂದಿಗೆ ಜಾಲತಾಣದಲ್ಲಿ ಬುಕ್ಕಿಂಗ್ ಮಾಡುತ್ತಿದ್ದ ಗ್ರಾಹಕರಿಗೆ ಅಸಲಿ ವಸ್ತುಗಳನ್ನು ಕಳುಹಿಸಲು ಕಂಪನಿಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಇದಕ್ಕೂ ಮುನ್ನವೇ ಆರೋಪಿಗಳು, ಅಧಿಕೃತ ಏಜೆನ್ಸಿಯಿಂದ ವಸ್ತುಗಳು ಡೆಲಿವರಿ ಆಗುವ ಮುನ್ನವೇ ಬೇರೆ ಕೊರಿಯರ್ ಮೂಲಕ ಗ್ರಾಹಕರ ವಿಳಾಸಕ್ಕೆ ನಕಲಿ ವಸ್ತುಗಳನ್ನು ಕಳುಹಿಸಿ ಹಣ ಪಡೆದುಕೊಳ್ಳುತ್ತಿದ್ದರು.

ವಸ್ತು ನಕಲಿ ಎಂಬುದು ಗೊತ್ತಾಗುತ್ತಿದ್ದಂತೆ ಗ್ರಾಹಕರು, ಜಾಲತಾಣ ಮೂಲಕ ಕಂಪನಿಗೆ ವಾಪಸು ಕಳುಹಿಸುತ್ತಿದ್ದರು. ಕೆಲ ಗ್ರಾಹಕರ ಖಾತೆಗೆ ಹಣ ಜಮೆ ಆಗುತ್ತಿತ್ತು. ಎರಡು ದಿನಗಳ ನಂತರ ಅಸಲಿ ವಸ್ತುಗಳು ಬಂದರೂ ಗ್ರಾಹಕರು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ, ಅಸಲಿ ವಸ್ತುಗಳನ್ನೂ ಏಜೆನ್ಸಿಯವರು ವಾಪಸು ಕಂಪನಿಗೆ ಕಳುಹಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಾದ ಬೆನ್ನಲ್ಲೇ ತನಿಖೆಗೆ ಇಳಿದ ಪೊಲೀಸರು, ಗ್ರಾಹಕರಿಗೆ ಕಳುಹಿಸುತ್ತಿದ್ದ ನಕಲಿ ಶಿಪ್‌ಮೆಂಟ್‌ನಲ್ಲಿನ ಏರ್‌ವೇ ಬಿಲ್‌ ನಂಬರ್‌, ಬ್ಲೂಡಾರ್ಚ್‌ ಕೊರಿಯರ್‌ ಸಬ್‌ಶಿಪರ್‌ ಆದ ನಿಂಬೂಸ್‌ ಪೋಸ್ಟ್‌ ಅವರ ಮಾಹಿತಿ, ಕೆವೈಸಿ, ಬ್ಯಾಂಕ್‌ ಖಾತೆ ಮಾಹಿತಿ ಆಧರಿಸಿ ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com