ಉಳ್ಳಾಲ ಕೆರೆಯಲ್ಲಿ ಮೀನುಗಳ ಸಾವು: ಟೀಕೆ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ; ಮೀನುಗಾರಿಕಾ ಇಲಾಖೆಗೆ ಪತ್ರ ಬರೆಯಲು ಮುಂದು!

ಯಶವಂತಪುರ ಹೋಬಳಿಯ ಉಳ್ಳಾಲ ಕೆರೆಯಲ್ಲಿ ಮೀನುಗಳ ಮಾರಣಹೋಮ ಘಟನೆ ಬಳಿಕ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದ ಬಿಬಿಎಂಪಿ, ಇದೀಗ ಎಚ್ಚೆತ್ತುಕೊಂಡಿದ್ದು, ಮೀನುಗಾರಿಕಾ ಇಲಾಖೆಗೆ ಪತ್ರ ಬರೆಯಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಯಶವಂತಪುರ ಹೋಬಳಿಯ ಉಳ್ಳಾಲ ಕೆರೆಯಲ್ಲಿ ಮೀನುಗಳ ಮಾರಣಹೋಮ ಘಟನೆ ಬಳಿಕ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದ ಬಿಬಿಎಂಪಿ, ಇದೀಗ ಎಚ್ಚೆತ್ತುಕೊಂಡಿದ್ದು, ಮೀನುಗಾರಿಕಾ ಇಲಾಖೆಗೆ ಪತ್ರ ಬರೆಯಲು ಮುಂದಾಗಿದೆ.

ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ವರೆಗೆ ಮೀನುಗಾರಿಕೆ ನಡೆಸದಂತೆ ಮೀನುಗಾರಿಕಾ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ಹೇಳಿದ್ದಾರೆ.

ಎಸ್‌ಟಿಪಿ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ಅಥವಾ ಎರಡು ವರ್ಷ ಬೇಕಾಗುತ್ತದೆ. ಕೆರೆಯು  24.14 ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆಯಲ್ಲಿ ಕೊಳಚೆ ನೀರು ಕಂಡುಬಂದಿದೆ ಎಂಬ ದೂರುಗಳು ಬಂದಿವೆ. ಮಲ್ಲತಳ್ಳಿ ಕೆರೆ ಬಳಿ ಕೊಳಚೆ ನೀರು ಸಂಸ್ಕರಣಾ ಘಟಕವಿದೆ. ಇದನ್ನು ಮೇಲ್ದರ್ಜೆಗೇರಿಸಬೇಕಿದೆ. ಮುಂದಿನ ದಿನಗಳಲ್ಲಿ ಮಳೆಯಿಂದ ಕೆರೆ ತುಬಿಂದರೂ ಕೂಡ ಕೆರೆಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ಅವರು ತಿಳಿಸಿದ್ದಾರೆ.

ಗುತ್ತಿಗೆದಾರರಿಗೆ ಪರವಾನಗಿ ನೀಡುವುದು ಮೀನುಗಾರಿಕೆ ಇಲಾಖೆ. ಈ ದಾಖಲೆಗಳ ಆಧಾರದ ಮೇಲೆ ಗುತ್ತಿಗೆದಾರರು ಬಿಬಿಎಂಪಿ ಕೆರೆಗಳಲ್ಲಿ ಗುತ್ತಿಗೆಗೆ ಅರ್ಜಿ ಸಲ್ಲಿಸುತ್ತಾರೆ. ಈ ಬಾರಿ ಕೆರೆ ತುಂಬುವವರೆಗೂ ಟೆಂಡರ್ ಕರೆಯುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿಯ ತ್ಯಾಜ್ಯ ನೀರು ನಿರ್ವಹಣೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುಯೀಜ್ ಅಹಮದ್ ಮಾತನಾಡಿ, ಮಲ್ಲತ್ತಳ್ಳಿಯಲ್ಲಿರುವ ಐದು ಎಂಎಲ್‌ಡಿ ಎಸ್‌ಟಿಪಿಯನ್ನು 10 ಎಂಎಲ್‌ಡಿಗೆ ಮೇಲ್ದರ್ಜೆಗೇರಿಸುವುದಾಗಿ ಬಿಬಿಎಂಪಿಗೆ ಪತ್ರ ನೀಡಲಾಗಿದೆ, ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಪೂರ್ಣಗೊಂಡ ಬಳಿಕ, ನೀರನ್ನು ಪರೀಕ್ಷಿಸಿ ನಂತರ ಉಳ್ಳಾಲ ಕೆರೆಗೆ ಬಿಡಲಾಗುವುದು ಎಂದು ಹೇಳಿದ್ದಾರೆ.

ಈ ನಡುವೆ ಘಟನೆ ಬಳಿಕ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಉಪ ಪರಿಸರ ಅಧಿಕಾರಿ ನವೀನ್ ಕೂಡ ಸ್ಥಳಕ್ಕೆ ಭೇಟಿ ನೀಡಿ, ಕೆರೆಯ ನೀರಿನ ಮಾದರಿಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಕೆರೆಯಲ್ಲಿ ಉಳಿದಿರುವ ಎಲ್ಲಾ ಸತ್ತ ಮೀನುಗಳನ್ನು ತೆಗೆಯುವಂತೆ ಬಿಬಿಎಂಪಿಗೆ ಸೂಚಿಸಿದರು.

ಕೆರೆ 24.14 ಎಕರೆ ವಿಸ್ತೀರ್ಣ ಹೊಂದಿದ್ದು, ಶೇ.95 ರಷ್ಟು ಬತ್ತಿ ಹೋಗಿದೆ. ಮುಂಗಾರು ವೈಫಲ್ಯ ಮತ್ತು ಎಸ್‌ಟಿಪಿಯಿಂದಾಗಿ ನೀರಿಲ್ಲದ ಕೆರೆ ಒಣಗಿದೆ. ಕಡಿಮೆ ನೀರು ಮತ್ತು ಆಮ್ಲಜನಕ ಮಟ್ಟ ಕುಸಿತದಿಂದಾಗಿ ಮೀನುಗಳು ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಎಸ್‌ಟಿಪಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೆ ಕೆರೆಯಲ್ಲಿ ಸದಾ ನೀರು ಇರುತ್ತದೆ, ಇಲ್ಲವಾದಲ್ಲಿ ಉತ್ತಮ ಮಳೆಯಾಗುವವರೆಗೆ ಕಾಯಬೇಕು’ ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಸರ್‌ ಎಂ ವಿಶ್ವೇಶ್ವರಯ್ಯ ಲೇಔಟ್‌ ಅಧ್ಯಕ್ಷ ಡಿಎಸ್‌ ಗೌಡ ಅವರು ಮಾತನಾಡಿ, ಕೆರೆಯಲ್ಲಿ ಹೂಳು ತೆಗೆಯುವಂತೆ ಮತ್ತು ಅಕ್ರಮ ಚಟುವಟಿಕೆ ತಪ್ಪಿಸಲು ಕೆರೆಗೆ ಬೇಲಿ ಹಾಕುವಂತೆ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com