ಮೀನುಗಳು ಮಾರಣಹೋಮ; ಆದರೂ ನಿಂತಿಲ್ಲ ಮಡಿವಾಳ ಕೆರೆಗೆ ಹರಿದು ಬರುತ್ತಿರುವ ಕೊಳಚೆ ನೀರು!
ನಗರದ ದೊಡ್ಡ ಕೆರೆಗಳಲ್ಲಿ ಒಂದಾದ ಮಡಿವಾಳ ಕೆರೆಯಲ್ಲಿ ಕಳೆದ ವಾರ ಮೀನುಗಳ ಮಾರಣಹೋಮವೇ ಕಂಡು ಬಂದಿತ್ತು. ಕಲುಷಿತ ನೀರಿನ ಪರಿಣಾಮ ನೂರಾರು ಮೀನುಗಳು ಸಾವನ್ನಪ್ಪಿದ್ದವು. ಘಟನೆ ಬಳಿಕವೂ ಕೆರೆಗೆ ಹರಿದುಬರುತ್ತಿರುವ ಕೊಳಚೆ ನೀರು ನಿಯಂತ್ರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ.
Published: 31st May 2023 12:20 PM | Last Updated: 31st May 2023 02:35 PM | A+A A-

ಮಡಿವಾಳ ಕೆರೆ
ಬೆಂಗಳೂರು: ನಗರದ ದೊಡ್ಡ ಕೆರೆಗಳಲ್ಲಿ ಒಂದಾದ ಮಡಿವಾಳ ಕೆರೆಯಲ್ಲಿ ಕಳೆದ ವಾರ ಮೀನುಗಳ ಮಾರಣಹೋಮವೇ ಕಂಡು ಬಂದಿತ್ತು. ಕಲುಷಿತ ನೀರಿನ ಪರಿಣಾಮ ನೂರಾರು ಮೀನುಗಳು ಸಾವನ್ನಪ್ಪಿದ್ದವು. ಘಟನೆ ಬಳಿಕವೂ ಕೆರೆಗೆ ಹರಿದುಬರುತ್ತಿರುವ ಕೊಳಚೆ ನೀರು ನಿಯಂತ್ರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ.
ಬಿಬಿಎಂಪಿ ಹಾಗೂ ಬೆಂಗಳೂರು ನಗರದ ವಿಭಾಗದ ಅರಣ್ಯ ಇಲಾಖೆಯ ಈ ನಿರ್ಲಕ್ಷ್ಯದ ವಿರುದ್ಧ ಕೆರೆ ಕಾರ್ಯಕರ್ತರು ವಾಗ್ದಾಳಿ ನಡೆಸಿದ್ದಾರೆ.
ಕೆರೆ ನೀರಿನ ಗುಣಮಟ್ಟ ಹಾಳಾಗಿರುವುದರಿಂದ ಇದು ಮೀನುಗಳ ಮೇಲಷ್ಟೇ ಅಲ್ಲ, ಸೂಕ್ಷ್ಮ ಜೀವಿಗಳ ಮೇಲೂ ಪರಿಣಾಮ ಬೀರುತ್ತಿದೆ. ಕೆರೆಗೆ ಕಾಯಕಲ್ಪ ನೀಡಲು ಕನಿಷ್ಟ ಒಂದು ವರ್ಷವಾದರೂ ಬೇಕು ಎಂದು ಫೆಡರೇಷನ್ ಆಫ್ ಬೆಂಗಳೂರು ಲೇಕ್ಸ್‌ನ ಕಾರ್ಯಕರ್ತ ಮಂಜುನಾಥ್ ಅವರು ಹೇಳಿದ್ದಾರೆ.
ಅಧಿಕಾರಿಗಳ ದುರ್ವರ್ತನೆಗೆ ಹಿಡಿಶಾಪ ಹಾಕಿದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರೀಕರು, ಕೆರೆಗೆ ಕೊಳಚೆ ನೀರು ಹರಿದುಬರುವುದನ್ನು ತಡೆಯಲು, ಸ್ವತಃ ಮಳೆನೀರು ಚರಂಡಿಯ ಗೋಡೆಯ ಒಂದು ಭಾಗವನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಇದೀಗ ಹೊಸಕೆರೆ ಕೆರೆಯಲ್ಲಿ ನೊರೆ, ಬಿಡಬ್ಲ್ಯೂಎಸ್ ಎಸ್ ಬಿ ಪೈಪ್ ಗಳತ್ತ ಬೊಟ್ಟು ಮಾಡಿದ ಬಿಬಿಎಂಪಿ!
ಉಪ ಅರಣ್ಯ ಸಂರಕ್ಷಾಧಿಕಾರಿ ಚಕ್ರಪಾಣಿ ವೈ ಅವರು ಮಾತನಾಡಿ, ಹಾನಿಗೊಳಗಾದ ಗೋಡೆ ಸರಿಪಡಿಸುವಂತೆ ಬಿಬಿಎಂಪಿಗೆ ತಿಳಿಸಲಾಗಿದೆ. ಇದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಎಲ್ಲಾ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಹೇಳಿದ್ದಾರೆ.
ಅರಣ್ಯ ಇಲಾಖೆಯು ಕೆರೆಗಳ ಒಳಹರಿವುಗಳನ್ನು ನಿರ್ವಹಿಸುವುದಿಲ್ಲ. ಇದು ಬಿಬಿಎಂಪಿಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ರೇಂಜ್ ಫಾರೆಸ್ಟ್ ಆಫೀಸರ್ ಮಾತನಾಡಿ, ಗೋಡೆ ನಿರ್ಮಾಣಕ್ಕೆ ನಾಗರೀಕರು ಸಹಾಯ ಮಾಡಿದ್ದಾರೆ. ಮಾನ್ಸೂನ್ ಆರಂಭವನ್ನು ಪರಿಗಣಿಸಿ ಈಗಾಗಲೇ ಇತರೆ ಕ್ರಮಗಳ ಕೈಗೊಳ್ಳಲಾಗಿದೆ. ಹೆಚ್ಚು ಸಂಖ್ಯೆಯ ಮೀನುಗಳು ಸಾವನ್ನಪ್ಪಿಲ್ಲ. ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.