ಹುಸಿಬಾಂಬ್ ಬೆದರಿಕೆ ಇಮೇಲ್: ಇಂದು ಎಂದಿನಂತೆ ಶಾಲೆ ಪುನರಾರಂಭ, 48 ಎಫ್ಐಆರ್ ದಾಖಲು

ನಗರದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಬಿಗುವಿನ, ಆತಂಕದ ವಾತಾವರಣ ಸೃಷ್ಟಿಯಾಗಿ ನಿನ್ನೆ ಪೋಷಕರು ಮಕ್ಕಳನ್ನು ಅರ್ಧದಲ್ಲಿಯೇ ಬಂದು ಶಾಲೆಗಳಿಂದ ಮನೆಗೆ ಕರೆದುಕೊಂಡು ಹೋದ ಪ್ರಸಂಗ ನಡೆದಿತ್ತು.
ಸದಾಶಿವನಗರದ ನೀವ್ ಅಕಾಡೆಮಿಗೆ ಶ್ವಾನದಳ ಭೇಟಿ
ಸದಾಶಿವನಗರದ ನೀವ್ ಅಕಾಡೆಮಿಗೆ ಶ್ವಾನದಳ ಭೇಟಿ

ಬೆಂಗಳೂರು: ನಗರದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಬಿಗುವಿನ, ಆತಂಕದ ವಾತಾವರಣ ಸೃಷ್ಟಿಯಾಗಿ ನಿನ್ನೆ ಪೋಷಕರು ಮಕ್ಕಳನ್ನು ಅರ್ಧದಲ್ಲಿಯೇ ಬಂದು ಶಾಲೆಗಳಿಂದ ಮನೆಗೆ ಕರೆದುಕೊಂಡು ಹೋದ ಪ್ರಸಂಗ ನಡೆದಿತ್ತು.

ಅದಾಗಿ ಇಂದು ಶನಿವಾರ ಎಂದಿನಂತೆ ಶಾಲೆಗಳು ಆರಂಭವಾಗಿದ್ದು ಪೋಷಕರು ಮಕ್ಕಳನ್ನು ಕರೆದುಕೊಂಡು ಬಂದು ಬಿಟ್ಟು ಹೋಗುತ್ತಿರುವುದು ಕಂಡುಬಂತು. ಮಕ್ಕಳು ಎಂದಿನಂತೆ ಶಾಲೆಗೆ ಬರುತ್ತಿದ್ದರು. ನಮಗೆ ಶಾಲೆಯಲ್ಲಿ ಪ್ರಾಂಶುಪಾಲರು, ಶಿಕ್ಷಕರು ರಕ್ಷಣೆ ನೀಡುತ್ತಾರೆ ಎಂದು ಮಕ್ಕಳು ಹೇಳುತ್ತಿರುವುದು ಕಂಡುಬಂತು.

48 ಎಫ್ ಐಆರ್ : ಇನ್ನು ನಗರದ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ ಪ್ರಕರಣ ಸಂಬಂಧ 48 ಎಫ್​ಐಆರ್​ಗಳು ದಾಖಲಾಗಿವೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಸೂಚನೆಯಂತೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್​ಗಳು ದಾಖಲಾಗಿವೆ. ಈ ಎಲ್ಲಾ ಎಫ್​ಐಆರ್​ಗಳನ್ನು ಕ್ರೋಢೀಕರಿಸಿ ಪೊಲೀಸರು ತನಿಖೆ ನಡೆಸಲಿದ್ದಾರೆ.

ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್​ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಗಳು ಅಗ್ಗಾಗೆ ಬರುತ್ತಿರುತ್ತವೆ. ಆದರೆ, ನಿನ್ನೆ ಬೆಂಗಳೂರಿನ 48 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಲಾಗಿತ್ತು. ಮೊದಲು 15 ಶಾಲೆಗಳಿಗೆ ಬೆದರಿಕೆ ಇಮೇಲ್​ ಬಂದಿದೆ. ಬಳಿಕ ಇನ್ನುಳಿದ ಆಡಳಿತ ಮಂಡಳಿಗಳು ತಮ್ಮ ತಮ್ಮ ಶಾಲೆಯ ಇಮೇಲ್ ಪರಿಶೀಲನೆ ಮಾಡಿದ ಬಳಿಕ 48 ಶಾಲೆಗಳಿಗೆ ಅಂತಹದ್ದೇ ಬೆದರಿಕೆ ಸಂದೇಶಗಳು ಬಂದಿರುವುದು ತಿಳಿದುಬಂದಿದೆ. ಬನ್ನೇರುಘಟ್ಟದ 7 ಶಾಲೆಗಳಿಗೆ, ಹೆಬ್ಬಗೋಡಿಯ 4, ಸರ್ಜಾಪುರದ 5, ಜಿಗಣಿಯ 2 ಶಾಲೆಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು.

ಬೆಂಗಳೂರಿನ ದಕ್ಷಿಣ ವಲಯ-1 ರಲ್ಲಿ 15 ಶಾಲೆಗಳಿಗೆ, ದಕ್ಷಿಣ ವಲಯ 2ರಲ್ಲಿ 3, ವಲಯ 3ರಲ್ಲಿ 10 ಹಾಗೂ ವಲಯ 4ರಲ್ಲಿ 4 ಶಾಲೆಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು. ಉತ್ತರ ವಲಯಗಳಲ್ಲಿ ಒಟ್ಟು 7 ಶಾಲೆಗಳಿಗೆ ಹಾಗೂ ಅನೇಕಲ್ ತಾಲೂಕಿನ 5 ಶಾಲೆಗಳಿಗೂ ಇಂತಹದ್ದೇ ಇಮೇಲ್ ಬಂದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com