ಅರ್ಜುನ ಪ್ರಾಣ ಕಳೆದುಕೊಂಡ ಜಾಗ, ಮೈಸೂರಿನ ಎಚ್‌ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ: ಸಿದ್ದರಾಮಯ್ಯ ಘೋಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 1 ರಂದು ಕಾಡಾನೆಯನ್ನು ಸೆರೆಹಿಡಿಯಲು ನಡೆಸಿದ ಕಾರ್ಯಾಚರಣೆಯಲ್ಲಿ ಸಾವಿಗೀಡಾದ 63 ವರ್ಷದ ಆನೆ 'ಅರ್ಜುನ'ನ ಸ್ಮಾರಕವನ್ನು ನಿರ್ಮಿಸುವುದಾಗಿ ಬುಧವಾರ ಘೋಷಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 1 ರಂದು ಕಾಡಾನೆಯನ್ನು ಸೆರೆಹಿಡಿಯಲು ನಡೆಸಿದ ಕಾರ್ಯಾಚರಣೆಯಲ್ಲಿ ಸಾವಿಗೀಡಾದ 63 ವರ್ಷದ ಆನೆ 'ಅರ್ಜುನ'ನ ಸ್ಮಾರಕವನ್ನು ನಿರ್ಮಿಸುವುದಾಗಿ ಬುಧವಾರ ಘೋಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸರ್ಕಾರದಿಂದಲೇ ಸ್ಮಾರಕ ನಿರ್ಮಾಣವಾಗಲಿದ್ದು, ಅರ್ಜುನ ಪ್ರಾಣ ಕಳೆದುಕೊಂಡ ಅರಣ್ಯದಲ್ಲಿರುವ ಜಾಗ ಹಾಗೂ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದರು.

ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ವೇಳೆ ಅರ್ಜುನ ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ಹೊತ್ತಿದ್ದನು. ಅರ್ಜುನ ಮತ್ತು ಕನ್ನಡಿಗರ ನಡುವೆ ಭಾವನಾತ್ಮಕ ಸಂಬಂಧವಿತ್ತು.

'ಅರ್ಜುನ ಆನೆಯ ಸಾವಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಕೇಳಿದ್ದೇನೆ. ಅರ್ಜುನ ಪ್ರಾಣಬಿಟ್ಟಿದ್ದ ಸಕಲೇಶಪುರದ ಅರಣ್ಯದಲ್ಲಿಯೇ ಸ್ಮಾರಕ ನಿರ್ಮಿಸಲು ಹೇಳಿದ್ದು, ಮೈಸೂರಿನ ಎಚ್.ಡಿ. ಕೋಟೆಯಲ್ಲಿಯೂ ಸ್ಮಾರಕ ನಿರ್ಮಿಸಲು ನಿರ್ದೇಶನ ನೀಡಿದ್ದೇವೆ' ಎಂದು ಸಿಎಂ ಪುನರುಚ್ಚರಿಸಿದರು.

'ಅರ್ಜುನ ಎಂಟು ಬಾರಿ ದಸರಾ ಸಂದರ್ಭದಲ್ಲಿ ಅಂಬಾರಿ ಹೊತ್ತಿದ್ದನು. ಅರ್ಜುನ ಇದೀಗ ಆಕಸ್ಮಿಕವಾಗಿ ಸಾವಿಗೀಡಾಗಿದ್ದಾನೆ. ಆತ ಹೆಚ್ಚು ಕಾಲ ಬದುಕಬೇಕಿತ್ತು. ಕಾಡಾನೆ ಸೆರೆ ಕಾರ್ಯಾಚರಣೆಗೆ ಆ ಆನೆಯನ್ನು ಬಳಸಿದ್ದರಿಂದ ಅದು ಸಾವಿಗೀಡಾಗಿದೆ' ಎಂದು ಹೇಳಿದ್ದಾರೆ.

ಅರ್ಜುನನನ್ನು ನೋಡಿಕೊಳ್ಳುತ್ತಿದ್ದ ಮಾವುತ್ ವಿನು, ಕಾರ್ಯಾಚರಣೆಯ ಸಮಯದಲ್ಲಿ ಅರ್ಜುನನ ಕಾಲಿಗೆ ಗಾಯವಾಯಿತು ಮತ್ತು ರಕ್ತಸ್ರಾವವಾಯಿತು. ಇದರ ನಡುವೆಯೂ ಆತ ಕಾಡಾನೆಯೊಂದಿಗೆ ಕಾಳಗ ನಡೆಸಿದ. ಆ ನಂತರ ಅವನ ಕಾಲಿಗೆ ಗುಂಡು ತಗುಲಿತು. ಅರ್ಜುನನು ಏಕಾಂಗಿಯಾಗಿ ಹೋರಾಡಿ ಗೆಲ್ಲುತ್ತಿದ್ದನು. ಆದರೆ, ಕಾಲಿಗೆ ಗಾಯವಾಗಿದ್ದರಿಂದ ಗೆಲ್ಲಲಾಗಲಿಲ್ಲ. ಕಾಡಾನೆ ಅರ್ಜುನನನ್ನು ಕೊಂದು ಹಾಕಿದೆ. ಅರ್ಜುನ 10 ಜನರ ಪ್ರಾಣ ಉಳಿಸಿ ತನ್ನ ಪ್ರಾಣ ತೆತ್ತಿದ್ದಾನೆ ಎಂದರು.

ಅರ್ಜುನ ಎಂಟು ಬಾರಿ ಜಂಬೂ ಸವಾರಿಯಲ್ಲಿ ಪಾಲ್ಗೊಂಡು ಅಚ್ಚುಮೆಚ್ಚಿನ ಆನೆಯಾಗಿದ್ದನು. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಶಾಂತವಾಗಿ ಮೆರವಣಿಗೆಯಲ್ಲಿ ಸಾಗಿಸಿದ್ದಾನೆ. ಕಾಡಾನೆಯೊಂದಿಗಿನ ಕಾದಾಟದಲ್ಲಿ ಅರ್ಜುನ ತನ್ನ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ವಿಷಾದ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ದೇವಿಗೆ ಅರ್ಜುನನ ಮಹತ್ವದ ಸೇವೆ ಮತ್ತು ಮೆರವಣಿಗೆಯಲ್ಲಿ ಲಕ್ಷಾಂತರ ಜನರ ನಡುವೆ ಆತನ ಗಾಂಭೀರ್ಯ ನಡಿಗೆಯ ಚಿತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿರಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com