ಧಾರವಾಡದ ಈ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ; ಹೋಟೆಲ್, ಕಟಿಂಗ್ ಶಾಪ್​ಗೆ ದಲಿತರಿಗಿಲ್ಲ ಪ್ರವೇಶ!

ಭಾರತವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳಲ್ಲಿ ಜಾತಿ ವ್ಯವಸ್ಥೆಯೂ ಒಂದು. ಅಸ್ಪೃಶ್ಯತೆಯನ್ನು ತಡೆಯಲು ನಾನಾ ಕಾನೂನುಗಳಿದ್ದರೂ, ಅಸ್ಪೃಶ್ಯತೆಯ ಪಿಡುಗು ಇನ್ನೂ ಸಮಾಜದಲ್ಲಿ ಜೀವಂತವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಬಂದರು ಮೇಲು-ಕೀಳು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಧಾರವಾಡ: ಭಾರತವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳಲ್ಲಿ ಜಾತಿ ವ್ಯವಸ್ಥೆಯೂ ಒಂದು. ಅಸ್ಪೃಶ್ಯತೆಯನ್ನು ತಡೆಯಲು ನಾನಾ ಕಾನೂನುಗಳಿದ್ದರೂ, ಅಸ್ಪೃಶ್ಯತೆಯ ಪಿಡುಗು ಇನ್ನೂ ಸಮಾಜದಲ್ಲಿ ಜೀವಂತವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಬಂದರು ಮೇಲು-ಕೀಳು, ಬಲಿಷ್ಟ-ಕನಿಷ್ಟವೆಂದು ಜಾತಿ ಆಧಾರದಲ್ಲಿ ಮನುಷ್ಯನನ್ನು ನೋಡುವ, ಮನುಷ್ಯನನ್ನು ಮುಟ್ಟಿಸಿಕೊಳ್ಳದೆ ದೂರವಿಡುವ ಕೀಳು ವ್ಯವಸ್ಥೆ ಇನ್ನೂ ಮುಂದುವರೆದಿದೆ. ಅಸ್ಪೃಶ್ಯತಾ ಆಚರಣೆಗಳು ಈಗಲೂ ಬೆಳಕಿಗೆ ಬರುತ್ತಲೇ ಇವೆ.

ಧಾರವಾಡ ಜಿಲ್ಲೆಯ ಗ್ರಾಮವೊಂದಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ರೊಟ್ಟಿಗವಾಡ ಗ್ರಾಮದಲ್ಲಿ ದಲಿತರನ್ನು ಸಾಮುದಾಯಿಕವಾಗಿ ದೂರವಿಟ್ಟು ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ.

ನೂರಾರು ವರ್ಷಗಳಿಂದ ಗ್ರಾಮದ ಹೋಟೆಲ್, ಸಲೂನ್ ಹಾಗೂ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.

ಗ್ರಾಮದ ಸಲೂನ್‌ಗಳಲ್ಲಿ ದಲಿತರಿಗೆ ಕಟಿಂಗ್-ಶೇವಿಂಗ್ ಮಾಡಲಾಗುತ್ತಿಲ್ಲ. ಹೋಟೆಲ್‌ಗಳಲ್ಲಿ ದಲಿತರನ್ನು ದೂರ ಕೂರಿಸಿ, ಪ್ಲಾಸ್ಟಿಕ್‌ ಪ್ಲೇಟ್‌ಗಳಲ್ಲಿ ಆಹಾರ ನೀಡಲಾಗುತ್ತದೆ. ಲೋಟಗಳನ್ನು ಮುಟ್ಟಲು ಬಿಡದೆ, ನೀರನ್ನು ದೂರದಿಂದ ಆ ತಟ್ಟೆಗೆ ಸುರಿಯುವ ಅಥವಾ ಬೊಗಸೆಯಲ್ಲಿ ಕುಡಿಸಲಾಗುತ್ತಿರುವುದಾಗಿ ಹೇಳಲಾಗತ್ತಿದೆ.

ಗ್ರಾಮದಲ್ಲಿ ಪ್ರಬಲ ಜಾತಿಗರು ಮತ್ತು ದಲಿತರ ನಡುವೆ ದೊಡ್ಡ ಅಂತರವಿದ್ದು, ದಲಿತ ಸಮುದಾಯದಲ್ಲಿ ಯಾರಾದರೂ ಮೃತಪಟ್ಟರೆ, ಅಂದು ಗ್ರಾಮದ ಎಲ್ಲ ಅಂಗಡಿಗಳನ್ನು ಮುಚ್ಚಲಾಗುತ್ತದೆ.

ಮೃತರ ಅಂತಿಮ ಸಂಸ್ಕಾರಕ್ಕಾಗಿ ಬರುವವರು ಅಂಗಡಿಗೆ ಬರುತ್ತಾರೆ ಎಂಬ ಕಾರಣಕ್ಕೆ ಎಲ್ಲಾ ಅಂಗಡಿಗಳನ್ನು ಬಂದ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಈ ನಡುವೆ ಈ ಅಸ್ಪೃಶ್ಯತೆ ವಿರುದ್ಧ ದಲಿತರ ಗುಂಪೊಂದು ಧ್ವನಿ ಎತ್ತಿದೆ. ನಮ್ಮ ಗ್ರಾಮದಲ್ಲಿ ಗ್ರಾಮದಲ್ಲಿ ನಾವು ಕ್ಷೌರ ಮಾಡಿಸಬೇಕೆಂದರೆ 500 ರೂಪಾಯಿಗಳನ್ನು ಪಾವತಿಸಬೇಕಿದೆ. ಹೋಟೆಲ್‌ಗಳಲ್ಲಿ ಕುರ್ಚಿಗಳನ್ನು ಬಳಸಲು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಇದರ ವಿರುದ್ಧ ಗುರುವಾರ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಪ್ರತಿಭಟನೆ ಬೆನ್ನಲ್ಲೇ ಈ ವಿಚಾರ ಎಲ್ಲೆಡೆ ಹರಡಿದ್ದು, ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

ಗ್ರಾಮದಲ್ಲಿ ಸುಮಾರು 40 ದಲಿತ ಕುಟುಂಬಗಳಿವೆ. ಮೇಲ್ಜಾತಿ ಜನರು ಸಮುದಾಯಗಳ ನಡುವೆ ಒಡಕು ಮೂಡಿಸುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

“ನಮ್ಮ ಗ್ರಾಮದಲ್ಲಿ ಕ್ಷೌರ ಮಾಡಲು ಸಾಧ್ಯವಾಗದ ಕಾರಣ, ನಾವು ಈ ಮೂಲಭೂತ ಅವಶ್ಯಕತೆಗಾಗಿ ಬೇರೆ ಪಟ್ಟಣಗಳಿಗೆ ಅಥವಾ ಹುಬ್ಬಳ್ಳಿಗೆ ಹೋಗುವಂತಾಗುತ್ತಿದೆ. ಗ್ರಾಮದ ಕ್ಷೌರಿಕರು ಮೇಲ್ವರ್ಗದ ಮುಖಂಡರು ಒಪ್ಪಿದರೆ ಮಾತ್ರ ನಮಗೆ ಕ್ಷೌರ ಮಾಡಲು ಒಪ್ಪುತ್ತಾರೆ. ದೇವಾಲಯದ ವಾತಾವರಣ ಹಾಳಾಗುತ್ತದೆ ಎಂದು ಪುರೋಹಿತರು ದೇವಸ್ಥಾನದ ಹತ್ತಿರ ಬರಬೇಡಿ ಎಂದು ಹೇಳುತ್ತಾರೆ.

ಇತರೆ ಗ್ರಾಹಕರು ಹೋಟೆಲ್ ಗಳಿಗೆ ಬರದ ಕಾರಣ ಹೋಟೆಲ್ ಗಳ ಮಾಲೀಕರು ನಮ್ಮನ್ನು ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವಂತೆ ಹೇಳುತ್ತಾರೆ. ನಾವು ಕುರ್ಚಿಗಳ ಮೇಲೆ ಕುಳಿತು ಆಹಾರ ಸೇವಿಸುವಂತಿಲ್ಲ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಅಶೋಕ್ ಹಿಂಡಲಮನಿ ಅವರು ಹೇಳಿದ್ದಾರೆ.

ಪ್ರತಿಭಟನೆಯ ಒಂದು ದಿನದ ನಂತರ ಶುಕ್ರವಾರ ಕುಂದಗೋಳ ತಹಶೀಲ್ದಾರ್ ಅಶೋಕ್ ಶಿಗ್ಗಾವಿ ಮತ್ತು ಇತರ ಅಧಿಕಾರಿಗಳು ಕುಂದಗೋಳ ಪಟ್ಟಣದಿಂದ 16 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿ ಮಾಡಿದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಂತಹ ಯಾವುದೇ ಅಸ್ಪೃಶ್ಯತೆ ಮತ್ತು ತಾರತಮ್ಯದ ಆಚರಣೆಯನ್ನು ನಡೆಯುತ್ತಿಲ್ಲ ಎಂದು ಹೇಳಿದರು. ಬಳಿಕ ಅಧಿಕಾರಿಗಳ ತಂಡ ದೇವಸ್ಥಾನ, ಹೋಟೆಲ್‌ಗಳಿಗೂ ಭೇಟಿ ನೀಡಿ, ಮಾಹಿತಿ ಕಲೆ ಹಾಕಿತು.

ಯಾವುದೇ ಪ್ರತಿಭಟನಾಕಾರರು ನಮ್ಮನ್ನು ಸಂಪರ್ಕಿಸಿಲ್ಲ. ಯಾವುದೇ ದೂರುಗಳೂ ಬಂದಿಲ್ಲ. ಶೀಘ್ರದಲ್ಲೇ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com