ಕೆಐಎ: ಲಗೇಜ್ ಬ್ಯಾಗ್‌ನಲ್ಲಿದ್ದ 1.5 ಲಕ್ಷ ರೂ. ಕಳವು, ದೂರು ದಾಖಲು!
ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರ ಬ್ಯಾಗ್ ನಲ್ಲಿದ್ದ 1.5 ಲಕ್ಷ ರೂ. ಕಳವಾಗಿದ್ದು, ಈ ಸಂಬಂಧ ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಹಾಗೂ ರೈತರಾಗಿರುವ ದಿನೇಶ್ ಕಲಹಳ್ಳಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ.
ಪರಿಸರ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಜಿಟಿ ನ್ಯಾಯಮಂಡಳಿಯಲ್ಲಿ ಪ್ರಕರಣವಿದ್ದು, ಈ ಸಂಬಂಧ ವಕೀಲರನ್ನು ಭೇಟಿ ಮಾಡಲು ಶುಕ್ರವಾರ ಚೆನ್ನೈಗೆ ತೆರಳಿದ್ದೆ. ಶನಿವಾರ ಬೆಂಗಳೂರಿಗೆ ವಾಪಸ್ಸಾಗಿದೆ.
ಡಿಸೆಂಬರ್ 16 ರಂದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2.15 ರೊಳಗೆ ಚೆಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಗೇಟ್ 15ಕ್ಕೆ ಬಂದಿದ್ದೆವು. ವಿಮಾನ (6E 847) ಒಂದು ಗಂಟೆ ತಡವಾಗಿ ಬಂದಿತ್ತು. ಸಂಜೆ 5 ಗಂಟೆಗೆ ವಿಮಾನ ಹೊರಟಿತ್ತು. ಸಂಜೆ 6 ಗಂಟೆಗೆ ಬೆಂಗಳೂರು ತಲುಪಿತ್ತು. ವಿಮಾನ ನಿಲ್ದಾಣದ ಒಳಗಿನಿಂದಲೇ ಟ್ಯಾಕ್ಸಿ ಬುಕ್ ಮಾಡಿದ್ದೆ.
ಟ್ಯಾಕ್ಸಿ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಂತೆ, ತಲೆನೋವು ಹಿನ್ನೆಲೆಯಲ್ಲಿ ಔಷಧಿಗಾಗಿ ಬ್ಯಾಗ್ ತೆರೆದಿದ್ದೆ. ಈ ವೇಳ ಹಣ ನಾಪತ್ತೆಯಾಗಿರುವುದು ತಿಳಿದುಬಂದಿತ್ತು. ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಪಡೆದುಕೊಂಡಾಗ ಪ್ಲಾಸ್ಟಿಕ್ ಜಿಪ್ ಟೈ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಅನಂತರ ಹಣ ನಾಪತ್ತೆಯಾಗಿರುವುದು ಗಮನಕ್ಕೆ ಬಂದ ಬಳಿಕ ಬೆಂಗಳೂರು ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಳಿಕ ನಾನು ಬ್ಯಾಗ್ ಪರಿಶೀಲಿಸಿರಲಿಲ್ಲ. ಬೆಂಗಳೂರಿಗೆ ಬಂದ ನಂತರ ಹಣ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಇಂಡಿಗೋ ವಿಮಾನದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದಿನೇಶ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ