ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಮೂಕಪ್ರೇಕ್ಷಕರಾಗಿದ್ದ ಗ್ರಾಮಸ್ಥರಿಂದ ದಂಡ ಸಂಗ್ರಹಿಸಿ; ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ

ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ವಂಟಮುರಿ ಗ್ರಾಮದ ಮಹಿಳೆಯೊಬ್ಬರ ವಿವಸ್ತ್ರ ಪ್ರಕರಣದ ಸಂದರ್ಭದಲ್ಲಿ ಮೂಕಪ್ರೇಕ್ಷಕರಾಗಿದ್ದ ಗ್ರಾಮದ ಜನರಿಂದ ಪರಿಹಾರದ ರೂಪದಲ್ಲಿ ಹಣ ಸಂಗ್ರಹಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ಸಲಹೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ವಂಟಮುರಿ ಗ್ರಾಮದ ಮಹಿಳೆಯೊಬ್ಬರ ವಿವಸ್ತ್ರ ಪ್ರಕರಣದ ಸಂದರ್ಭದಲ್ಲಿ ಮೂಕಪ್ರೇಕ್ಷಕರಾಗಿದ್ದ ಗ್ರಾಮದ ಜನರಿಂದ ಪರಿಹಾರದ ರೂಪದಲ್ಲಿ ಹಣ ಸಂಗ್ರಹಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ಸಲಹೆ ನೀಡಿದೆ.

ಮಹಿಳೆಯ ವಿವಸ್ತ್ರ ಘಟನೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸೋಮವಾರ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು ಇಡೀ ಘಟನೆಯಲ್ಲಿ ಗ್ರಾಮಸ್ಥರು ಮೂಕ ಪ್ರೇಕ್ಷಕರಾಗಿದ್ದಾರೆ. ಗ್ರಾಮದ ಪ್ರತಿಯೊಬ್ಬರಿಂದ ತೆರಿಗೆ ರೂಪದಲ್ಲಿ ಒಂದಷ್ಟು ಹಣ ಸಂಗ್ರಹಿಸಲಿ. ಇದರಿಂದ ಸಂದೇಶ ರವಾನೆಯಾಗಲಿ. ಇದೊಂದು ಪಾಠವಾಗಲಿ ಎಂದು ಹೇಳಿತು.

ಗ್ರಾಮದ ಎಲ್ಲರಿಗೂ, ನಿರ್ದಿಷ್ಟವಾಗಿ ತಪ್ಪು ಮಾಡಿದವರು ಹಣ ಪಾವತಿಸುವಂತೆ ಮಾಡಬೇಕು. ಬ್ರಿಟಿಷರ ಕಾಲದಲ್ಲಿ ವಿಲಿಯಮ್‌ ಬೆಂಟಿಂಗ್ ಎಂಬಾತ ಕಳ್ಳತನ ಮಾಡುವವರಿದ್ದ ಗ್ರಾಮಕ್ಕೆ ಪುಂಡ ದಂಡ ಎಂಬ ತೆರಿಗೆ ವಿಧಿಸುತ್ತಿದ್ದ. ಅದೇ ರೀತಿಯಲ್ಲಿ ತೆರಿಗೆ ವಿಧಿಸಿದಲ್ಲಿ ಗ್ರಾಮಗಳಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಲಿದೆ. ಆಗ ಇಂತಹ ಘಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೌನವಾಗಿರದೆ ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಗ್ರಾಮದ ಸಾಕ್ಷರತೆ ಪ್ರಮಾಣವೇನು? ಸರ್ಕಾರ ಯಾವಾಗಲೂ ಆಲಸಿಯಾಗಿ ವರ್ತಿಸುತ್ತದೆ. ಜನರ ಭಾಗಿದಾರಿಕೆ ಹೇಗಿದೆ? ಇಂಥ ಘಟನೆಗಳನ್ನು ನಿಯಂತ್ರಿಸುವುದಾದರೂ ಹೇಗೆ? ನಾವು ನಾಗರಿಕ ಸಮಾಜ ಎಂದು ಹೇಳಿಕೊಳ್ಳುತ್ತೇವೆ. ಇದರಲ್ಲಿ ಗ್ರಾಮಸ್ಥರ ಪಾತ್ರ ಏನಿದೆ? ಈ ಘಟನೆಗೆ ಜನರು ಏಕೆ ಮೂಕಪ್ರೇಕ್ಷಕರಾಗಿದ್ದರು ಎಂಬುದಕ್ಕೆ ಕಾರಣಗಳಿವೆಯೇ? ಅವರು ಪೊಲೀಸ್‌, ನ್ಯಾಯಾಂಗ, ರಾಜಕೀಯ ವ್ಯಕ್ತಿಗಳಿಗೆ ಹೆದರಿದ್ದಾರೆಯೇ?ಎಂದು ನ್ಯಾಯಪೀಠ ಪ್ರಶ್ನಿಸಿತು.

ಜನರು ಏಕೆ ಅಪರಾಧದ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂಬ ಸಾಮಾಜಿಕ ಆಯಾವನ್ನು ನಿರ್ಲಕ್ಷಿಸಲಾಗದು. ತಮ್ಮನ್ನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಿಲುಕಿಸಲಾಗುತ್ತದೆ. ತಮಗೆ ಸೂಕ್ತ ಗೌರವ ಸಿಗುವುದಿಲ್ಲ ಎಂದು ಸಾಕ್ಷಿಗಳು ಹೆದರುತ್ತಿದ್ದಾರೆ. “ಕೆಲವು ಕಡೆಗಳಲ್ಲಿ ಹೊರತುಪಡಿಸಿ ಪೊಲೀಸ್‌ ಠಾಣೆಗಳಲ್ಲಿ ಸಾಕ್ಷಿಗಳು ಮತ್ತು ಆರೋಪಿಗಳಿಗೆ ವ್ಯತ್ಯಾಸವೇ ಇಲ್ಲದಂತಾಗಿದೆ. ಇದು ಜನರಿಗೆ ಒಪ್ಪಿಗೆಯಾಗುವುದಿಲ್ಲ.

ಪೊಲೀಸರ ನಡತೆ, ಅದೇ ರೀತಿ ನ್ಯಾಯಾಲಯದ್ದೂ ಕೂಡ, ಜನರಲ್ಲಿ ತಮ್ಮನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳಲಾಗುವುದು ಎನ್ನುವ ವಿಶ್ವಾಸವನ್ನು ಅಧಿಕಾರಿಗಳು ಹುಟ್ಟಿಸುತ್ತಿಲ್ಲ. ಅವರನ್ನು ಸೂಕ್ತವಾಗಿ ನಡೆಸಿಕೊಳ್ಳುವ ವಿಚಾರದಲ್ಲಿ. ಈ ಕುರಿತು 72ನೇ ಪೊಲೀಸ್‌ ವರದಿಯಲ್ಲಿ ವಿವರಿಸಲಾಗಿದೆ. ಸಾಮೂಹಿಕ ಮೂರ್ಖತನ ಸಾಮಾಜಿಕ ವಿಚಾರವಾಗಿದೆ. ಇದಕ್ಕೆ ಮುಖಾಮುಖಿಯಾಗಬೇಕು. ಪೊಲೀಸರು ತಮ್ಮದು ಬ್ರಿಟಿಷ್‌ ಆಡಳಿತ ಎಂದುಕೊಳ್ಳಬಾರದು” ಎಂದು ಹೇಳಿತು.

ಘಟನೆ ನಡೆಯುತ್ತಿದ್ದರೂ ಇಡೀ ಗ್ರಾಮದಲ್ಲಿ ಯಾರೂ ಏಕೆ ಮುಂದೆ ಬರಲಿಲ್ಲ. ಈ ರೀತಿ ಹೇಗೆ ಆಯಿತು. ಈ ವಿಚಾರಗಳನ್ನು ಸಂಗ್ರಹಿಸಬೇಕು. ಇದನ್ನು ಕಾನೂನು ಆಯೋಗಕ್ಕೆ ತಿಳಿಸಬೇಕು. ಇದರಿಂದ ಕಾನೂನು ರೂಪಿಸಲು ಸಹಾಯಕವಾಗಲಿದೆ. ಈ ರೀತಿಯಲ್ಲಿ ಕಾನೂನು ಮುನ್ನಡೆಯುತ್ತದೆ. ಇಲ್ಲವಾದಲ್ಲಿ ಅದು ಜನರ ಕಾನೂನಾಗುವುದಿಲ್ಲ. ಜನರ ಬದುಕನ್ನು ಕಾನೂನು ಆಧರಿಸಿರಬೇಕು. ಆಗ ಅದಕ್ಕೆ ಅರ್ಥಬರುತ್ತದೆ. ಇಲ್ಲವಾದಲ್ಲಿ ಅದು ಅಪರಿಚಿತವಾಗಲಿದೆ” ಎಂದು ಮಾರ್ಮಿಕವಾಗಿ ನುಡಿಯಿತು.

ಬಳಿಕ ಆರೋಪಿಗಳ ಕ್ರಮಕ್ಕಿಂತ ಅದನ್ನು ನೋಡುತ್ತಾ ಮೂಖವಾಗಿ ನಿಂತಿದ್ದವರ ವರ್ತನೆ ಆತಂಕಕಾರಿಯಾಗಿದೆ ಎಂದ ನ್ಯಾಯಪೀಠ ಇಲ್ಲಿ ಸಾಮೂಹಿಕ ಜವಾಬ್ದಾರಿಯನ್ನು ನಿಗದಿಪಡಿಸಬೇಕಿದೆ. ಇದು ಸಾಮೂಹಿಕ ಮೂರ್ಖತನ, ಗ್ರಾಮಸ್ಥರ ಬೇಜವಾಬ್ದಾರಿತನ” ಎಂದು ಕಟುವಾಗಿ ನುಡಿಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com