ಬೆಂಗಳೂರು: ನಟ ಡಾ.ವಿಷ್ಣುವರ್ಧನ್ ಸ್ಮಾರಕ ವಿವಾದ ಬಗೆಹರಿಸುವಂತೆ ಒತ್ತಾಯಿಸಿ ಭಾನುವಾರ 50 ಕ್ಕೂ ಹೆಚ್ಚು ವಿವಿದ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ವಿಷ್ಣುವರ್ಧನ್ ಅವರ ಅಭಿಮಾನಿಗಳು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭನೆ ನಡೆಸಿದರು.
2009ರ ಡಿಸೆಂಬರ್ ತಿಂಗಳಿನಲ್ಲಿ ನಿಧನರಾದ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಉತ್ತರಹಳ್ಳಿ-ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ನೆರವೇರಿಸಲಾಗಿತ್ತು. ಇದೀಗ ಈಗಾಗಲೇ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ, ಆದರೆ, ಇದನ್ನು ಒಪ್ಪದ ಅಭಿಮಾನಿಗಳು ಅಂತ್ಯಕ್ರಿಯೆ ನಡೆಸಿದ ಭೂಮಿಯನ್ನೇ ಅಭಿವೃದ್ಧಿಪಡಿಸಿ ಅಭಿಮಾನಿಗಳ ಭೇಟಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಈ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕ.ರಾ.ವಿ.) (ಟಿ.ಎ. ನಾರಾಯಣಗೌಡ ಬಣ), ದಲಿತ ಸಂಘರ್ಷ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಘಟಕ ಸೇರಿದಂತೆ ಸುಮಾರು 40 ಸಂಘಟನೆಗಳು ಬೆಂಬಲ ಸೂಚಿಸಿವೆ.
ಒಕ್ಕೂಟದ ಮುಖಂಡ ವೀರಕಪುತ್ರ ಶ್ರೀನಿವಾಸ್ ಮಾತನಾಡಿ. ‘ಕನ್ನಡ ಚಿತ್ರರಂಗದ ಮೇರುನಟ ವಿಷ್ಣುವರ್ಧನ್. ಅಭಿಮಾನ್ ಸ್ಟುಡಿಯೊದಲ್ಲಿ ಅವರ ಪುಣ್ಯಭೂಮಿ ಇದೆ. ಅಭಿಮಾನಿಗಳು ಪುಣ್ಯಭೂಮಿಗೆ ಹೋಗಲು ಸ್ಟುಡಿಯೊ ಮಾಲೀಕರು ನಿರ್ಬಂಧ ವಿಧಿಸುತ್ತಿದ್ದಾರೆ. ವಿಷ್ಣುವರ್ಧನ್ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆ ಆಚರಿಸಲು ತೊಂದರೆ ಉಂಟಾಗುತ್ತಿದೆ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ಅಭಿವೃದ್ಧಿಗಾಗಿ ಅಭಿಮಾನಿಗಳು ಕಳೆದ 14 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಎಲ್ಲಾ ವರ್ಷಗಳಲ್ಲಿಯೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ.
ಮೂರು ತಿಂಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಿದ್ದೆವು. ಯಾವುದೇ ಪ್ರಗತಿಯಾಗದ ಕಾರಣ ಪ್ರತಿಭಟನೆ ನಡೆಸಲು ನಿರ್ಧರಿಸಿದೆವು. ನಮ್ಮ ಪ್ರತಿಭಟನೆಗೆ 40 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ಸಂಬಂಧ ಸರ್ಕಾರ ಪ್ರತಿಕ್ರಿಯೆ ಆಧರಿಸಿ ಮುಂದಿನ ನಡೆಯನ್ನು ನಿರ್ಧರಿಸುತ್ತೇವೆ. ಬೇಡಿಕೆ ಈಡೇರದಿದ್ದಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ, ಸರ್ಕಾರಕ್ಕೆ ಜಮೀನಿನ ವೆಚ್ಚ ಭರಿಸಲು ಸಾಧ್ಯವಾಗದಿದ್ದರೆ ಅಭಿಮಾನಿಗಳು ಭರಿಸಲಿದ್ದಾರೆಂದು ಹೇಳಿದರು.
Advertisement