

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಗೆ ಮೂರು ದಿನಗಳ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ನಿನ್ನೆ ಸಂಸತ್ತು ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಐದು ಪ್ರಮುಖ ಬೇಡಿಕೆಗಳನ್ನು ಹೊತ್ತ ಮನವಿಯನ್ನು ಪ್ರಧಾನಿಯವರಿಗೆ ಮುಖ್ಯಮಂತ್ರಿಗಳು ಈ ವೇಳೆ ಸಲ್ಲಿಸಿದ್ದರು.
ಇಂದು ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ?: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಕೃಷಿ ನಷ್ಟ, ಬರಪರಿಸ್ಥಿತಿ ನಿರ್ವಹಣೆಗೆ ಬೇಕಾಗಿರುವ ಕೇಂದ್ರದ ನೆರವಿನ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದಿಂದ ಹದಿನೆಂಟು ಸಾವಿರ ಕೋಟಿ ರೂಪಾಯಿ ನೆರವು ಕೇಳಿದೆ. ಈ ಹಿಂದೆ ರಾಜ್ಯದ ಸಚಿವರು ಕೇಂದ್ರ ಕೃಷಿ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈವರೆಗೂ ನೆರವು ಸಿಕ್ಕಿಲ್ಲದ ಹಿನ್ನೆಲೆಯಲ್ಲಿ ಎರಡನೇ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಮಾಡಲಿದ್ದಾರೆ.
ಇಂದು ಪ್ರಧಾನಿಯವರನ್ನು ಭೇಟಿಯಾಗಿ ಪರಿಹಾರ ಬಿಡುಗಡೆಗೆ ಮನವಿ ಮಾಡುವುದರೊಂದಿಗೆ ಸಿದ್ದರಾಮಯ್ಯನವರು ಮನರೇಗಾ ಯೋಜನೆಯಡಿ ಕೆಲಸದ ದಿನವನ್ನು 150 ದಿನಗಳಿಗೆ ಏರಿಕೆ ಮಾಡುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಸಾಧ್ಯತೆ ಇದೆ. ಬರ ಪರಿಹಾರ ಬಿಡುಗಡೆ ಸಮಿತಿಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರನ್ನು ಇಂದು ಭೇಟಿ ಮಾಡಿ ರೈತರ ಸಂಕಷ್ಟಕ್ಕೆ ಶೀಘ್ರ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಲಿದ್ದಾರೆ.
ಇಂದು ಬೆಳಗ್ಗೆ ಅಮಿತ್ ಶಾ ಭೇಟಿಗೂ ಅವಕಾಶ ಸಿಕ್ಕಿದ್ದು, ಬರ ಪರಿಹಾರ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಹಣ ಬಿಡುಗಡೆಗೆ ಸಿಎಂ ಒತ್ತಾಯಿಸಲಿದ್ದಾರೆ.