ಪ್ರವಾಸಿಗರ ನೆಚ್ಚಿನ ತಾಣ ನಂದಿ ಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು ಸಂಚಾರ ಆರಂಭ!

ನಗರವಾಸಿಗಳು ತಮ್ಮ ವಾರಾಂತ್ಯವನ್ನು ನೆಮ್ಮದಿಯಾಗಿ ಕಳೆಯಲು ಹೆಚ್ಚಾಗಿ ನಂದಿ ಬೆಟ್ಟವನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಇಲ್ಲಿನ ತಂಪಾದ ವಾತಾವರಣ, ಸುಂದರ ಸೂರ್ಯಾಸ್ತ ಎಂತವರನ್ನು ಮಂತ್ರಮುಗ್ಧಗೊಳಿಸುತ್ತದೆ. ಆದರೆ, ಪ್ರವಾಸಿಗರು ನಂದಿ ಬೆಟ್ಟದ ತುದಿಯನ್ನು ತಲುಪಲು ಹೆಚ್ಚುವರಿಯಾಗಿ 1.4 ಕಿ.ಮೀ ಪ್ರಯಾಣಿಸಬೇಕಿತ್ತು.
ದೊಡ್ಡಜಾಲ ನಿಲ್ದಾಣ.
ದೊಡ್ಡಜಾಲ ನಿಲ್ದಾಣ.

ಬೆಂಗಳೂರು: ನಗರವಾಸಿಗಳು ತಮ್ಮ ವಾರಾಂತ್ಯವನ್ನು ನೆಮ್ಮದಿಯಾಗಿ ಕಳೆಯಲು ಹೆಚ್ಚಾಗಿ ನಂದಿ ಬೆಟ್ಟವನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಇಲ್ಲಿನ ತಂಪಾದ ವಾತಾವರಣ, ಸುಂದರ ಸೂರ್ಯಾಸ್ತ ಎಂತವರನ್ನು ಮಂತ್ರಮುಗ್ಧಗೊಳಿಸುತ್ತದೆ. ಆದರೆ, ಪ್ರವಾಸಿಗರು ನಂದಿ ಬೆಟ್ಟದ ತುದಿಯನ್ನು ತಲುಪಲು ಹೆಚ್ಚುವರಿಯಾಗಿ 1.4 ಕಿ.ಮೀ ಪ್ರಯಾಣಿಸಬೇಕಿತ್ತು.

ಈ ಸಮಸ್ಯೆ ಇದೀಗ ದೂರಾಗಿದೆ. ಬೆಟ್ಟದ ತುದಿ ತಲುಪಲು ಎಲೆಕ್ಟ್ರಿಕ್ ರೈಲಿನಲ್ಲಿ ಹೋಗುವ ಅವಕಾಶ ಸಿಕ್ಕಿದೆ. ಪ್ರವಾಸಿಗರ ಸೆಳೆಯುವ ಉದ್ದೇಶದಿಂದ ಮೆಮು (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ನಡುವೆ ಮೂರು ಜೋಡಿ ಮೆಮು (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಶತಮಾನದ ಇತಿಹಾಸವಿರುವ ವಿವಿಧ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ನೈರುತ್ಯ ರೈಲ್ವೆ ಮುಂದಾಗಿದ್ದು, ಮೊದಲ ಹಂತದಲ್ಲಿ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ಮತ್ತು ನಂದಿ ಹಾಲ್ಟ್‌ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ. ಹಳೆಯ ಶೈಲಿಯನ್ನೇ ಉಳಿಸಿಕೊಂಡು, ನಾಲ್ಕೂ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಬ್ರಿಟಿಷರ ಕಾಲದಲ್ಲಿ ವಸಾಹತುಶಾಹಿ ಮತ್ತು ಮೈಸೂರು ಶೈಲಿ ವಾಸ್ತುಶಿಲ್ಪಗಳ ಮಿಶ್ರಣಗೊಳಿಸಿ ಹೈಬ್ರಿಡ್‌ ವಾಸ್ತುಶಿಲ್ಪ ಶೈಲಿಯಲ್ಲಿ 107 ವರ್ಷಗಳ ಹಿಂದೆ ಈ ನಾಲ್ಕು ಚಿಕ್ಕ ನಿಲ್ದಾಣಗಳನ್ನು ನಿರ್ಮಿಸಲಾಗಿತ್ತು. ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ನಿಲ್ದಾಣಗಳು ಒಂದೇ ವಿನ್ಯಾಸ ಹೊಂದಿದ್ದು, ನಂದಿ ಹಾಲ್ಟ್‌ ನಿಲ್ದಾಣ ಮಾತ್ರ ಭಿನ್ನ ವಿನ್ಯಾಸದಲ್ಲಿರಲಿದೆ ಎಂದು ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ಅವರು ಹೇಳಿದ್ದಾರೆ.

ಪ್ರತಿ ಕಟ್ಟಡದಲ್ಲಿ ನಾಲ್ಕು ಪಾರ್ಶ್ವಗಳ ಮಂಗಳೂರು ಹೆಂಚಿನ ಗೇಬಲ್ ಚಾವಣಿ, ಪ್ರತಿ ಗೇಬಲ್‌ನಲ್ಲಿ ವೃತ್ತಾಕಾರದ ಕಿಟಕಿ, ಸಣ್ಣ ಪಡಸಾಲೆ, ಸ್ಥಳೀಯ ಕಡಪ ಕಲ್ಲಿನ ನೆಲಹಾಸುಗಳಿವೆ. ನಿಲ್ದಾಣಗಳ ಕಟ್ಟಡಗಳ ಗೋಡೆಗಳು ಬಿರುಕುಬಿಟ್ಟಿದ್ದವು. ಹೆಂಚುಗಳು ಅಸ್ತವ್ಯಸ್ತವಾಗಿದ್ದವು. ಒಟ್ಟಾರೆ ಕಟ್ಟಡಗಳು ಶಿಥಿಲಗೊಂಡಿದ್ದವು. ಇಂಟ್ಯಾಕ್‌ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಪಡೆದು, ಈ ಕಟ್ಟಡಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ನಿಲ್ದಾಣದ ಆಸುಪಾಸಿನಲ್ಲಿ ಆರ್ಟ್‌ ಗ್ಯಾಲರಿ, ಗ್ರಂಥಾಲಯ, ರೇಷ್ಮೆ ಮ್ಯೂಸಿಯಮ್‌ಗಳ ನಿರ್ಮಾಣ ಸೇರಿದಂ‌ತೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.

ಎರಡು ಮೆಮು ರೈಲುಗಳು ಡಿಸೆಂಬರ್ 11 ರಂದು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಬೆಳಿಗ್ಗೆ 5.10 ಮತ್ತು 4 ಗಂಟೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಯಶವಂತಪುರದಿಂದ ಮೂರನೇ ರೈಲು ಬೆಳಗ್ಗೆ 10.10ಕ್ಕೆ ಆರಂಭವಾಗುತ್ತದೆ. ಈ ರೈಲುಗಳು 1.5 ಗಂಟೆಗಳಲ್ಲಿ ಪ್ರಯಾಣವನ್ನು ಪೂರೈಸುತ್ತವೆ, ಚಿಕ್ಕಬಳ್ಳಾಪುರದವರೆಗೆ ಟಿಕೆಟ್ ದರ 40 ರೂ. ಇರಲಿದೆ ಎಂದು ಮಾಹಿತಿ ನೀಡಿದರು.

ದೇವನಹಳ್ಳಿವರೆಗೆ ಸಂಚರಿಸುತ್ತಿದ್ದ ರೈಲುಗಳನ್ನು ಈಗ ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸಲಾಗಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 6ರಷ್ಟು ಹೆಚ್ಚಳವಾಗಿದೆ. ನಂದಿ ನಿಲ್ದಾಣವು ಇನ್ನೂ ನಿರ್ಮಾಣ ಹಂತದಲ್ಲಿದೆ, ಇದನ್ನು ರೈಲ್ ಮ್ಯೂಸಿಯಂ ಕಮ್ ರೈಲ್ ಪಾರ್ಕ್ ಆಗಿ ಪರಿವರ್ತಿಸಲಾಗುವುದು. 13 ಎಕರೆ ಜಮೀನಿನಲ್ಲಿ. ಫೀಡರ್ ಬಸ್ ಸೇವೆಗಾಗಿ ರೈಲ್ವೆ ಇಲಾಖೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪತ್ರ ಬರೆದಿದೆ ಎಂದು ತಿಳಿಸಿದರು.

ಆದರೆ, ರೈಲ್ವೇ ಸಚಿವಾಲಯದ ಅಡಿಯಲ್ಲಿರುವ ಪ್ರಯಾಣಿಕರ ಸೌಕರ್ಯಗಳ ಸಮಿತಿಯ ಸದಸ್ಯರು ಭಾನುವಾರ ರೈಲು ಸೇವೆಗಳು ಲಭ್ಯವಿರುವುದಿಲ್ಲ ಮತ್ತು ಬೆಂಗಳೂರಿನಿಂದ ವಿಶೇಷವಾಗಿ ಐಟಿ ವಲಯದ ಜನರು ಈ  ಸೇವೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ನಂದಿ ಹಾಲ್ಟ್ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಆಯುಷ್ ರೈನಾ ಎಂಬುವವರು ಮಾತನಾಡಿ, “ನಾನು ಈ ಸೇವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದುಕೊಂಡೆ. ಇದು ನನ್ನ ಮೊದಲ ಪ್ರವಾಸವಾಗಿದೆ. ರೈಲಿನಲ್ಲಿ ಸ್ವಚ್ಛತೆ ಅತ್ಯುತ್ತಮವಾಗಿದ್ದು, ಟಿಕೆಟ್ ದರ ಕೂಡ ಕಡಿಮೆಯಿದೆ. ಬೆಂಗಳೂರಿನಿಂದ ಪ್ರಯಾಣಿಸಲು ತುಂಬಾ ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ಪ್ರಯಾಣಿಕ ಅನುಗ್ರಹ ರೂಬೆನ್ ಎಂಬವವರು ಮಾತನಾಡಿ, ರೈಲು ಸೇವೆಯನ್ನು ಶ್ಲಾಘಿಸಿದರು. ಕ್ಯಾಬ್ ಗಳಿಗೆ ಮಾಡುತ್ತಿದ್ದ ದುಬಾರಿ ವೆಚ್ಚ. ಸಂಚಾರ ದಟ್ಟಣೆಯಿಂದ ಉಂಟಾಗುತ್ತಿದ್ದ ಕಿರಿಕಿರಿಯನ್ನು ನೋಡಿದರೆ, ರೈಲು ಸೇವೆ ಅನುಕೂಲಕರವಾಗಿದೆ ಎಂದು ತಿಳಿಸಿದರು.

ಮೆಮು ಎಂಬುದು ʼಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ʼ ಎಂಬುದರ ಸಂಕ್ಷಿಪ್ತ ರೂಪ. ಭಾರತೀಯ ರೈಲ್ವೆಯಲ್ಲಿ ಮೆಮು ಎಂಬುದು ವಿದ್ಯುಚ್ಚಾಲಿತ ಮಲ್ಟಿಪಲ್ ಯೂನಿಟ್ ರೈಲು. ಇದು ನಗರ ಮತ್ತು ಉಪನಗರ ಪ್ರದೇಶಗಳನ್ನು ಸಂಪರ್ಕಿಸುವ ಸಾಮಾನ್ಯ ಇಎಂಯು ರೈಲುಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಮತ್ತು ಮಧ್ಯಮ ದೂರದ ಮಾರ್ಗಗಳಿಗೆ ಸೇವೆ ಸಲ್ಲಿಸುತ್ತದೆ.

ರೈಲು ಇಂಜಿನ್'ಗೆ ಸಿಲುಕಿದ ನವಿಲು
ಈ ನಡುವೆ ಶುಕ್ರವಾರ ಬೆಳಿಗ್ಗೆ ಯಶವಂತಪುರದಿಂದ ತನ್ನ ಕಾರ್ಯಾಚರಣೆ ಆರಂಭಿಸಿದ್ದ ಮೊದಲು ರೈಲಿನ ಇಂಜಿನ್‌ನಲ್ಲಿ ನವಿಲು ಸಿಲುಕಿಕೊಂಡಿದ್ದು ಕಂಡು ಬಂದಿತ್ತು.

ಇಂಜಿನ್'ಗೆ ಸಿಲುಕಿಕೊಂಡ ಪರಿಣಾಮ ನವಿಲಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ.

ಇಂಜಿನ್'ಗೆ ನವಿಲು ಸಿಲುಕಿರುವುದನ್ನು ಗಮನಿಸಿದ ರೈಲ್ವೇ ಸಿಬ್ಬಂದಿ ಕೂಡಲೇ ಅದನ್ನು ಹೊರತೆಗೆದರು. ಬಳಿಕ ಚಿಕಿತ್ಸೆಗಾಗಿ ಸ್ಥಳೀಯ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದುು ರೈಲ್ವೆ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com