ಮಾಜಿ ಪ್ರಿಯತಮೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕರ್ನಾಟಕದ ಕ್ರಿಕೆಟಿಗ, ಯುವತಿಯಿಂದಲೂ ದೂರು!

ಕರ್ನಾಟಕದ ಕ್ರಿಕೆಟಿಗ ಕೆ.ಸಿ ಕಾರ್ಯಪ್ಪ (KC Cariappa) ತನ್ನ ಮಾಜಿ ಪ್ರಿಯತಮೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯುವತಿ ಕೂಡ ಪ್ರತಿ ದೂರು ದಾಖಲಿಸಿದ್ದಾರೆ.
ಕ್ರಿಕೆಟಿಗ ಕೆಸಿ ಕಾರ್ಯಪ್ಪ
ಕ್ರಿಕೆಟಿಗ ಕೆಸಿ ಕಾರ್ಯಪ್ಪ

ಬೆಂಗಳೂರು: ಕರ್ನಾಟಕದ ಕ್ರಿಕೆಟಿಗ ಕೆ.ಸಿ ಕಾರ್ಯಪ್ಪ (KC Cariappa) ತನ್ನ ಮಾಜಿ ಪ್ರಿಯತಮೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯುವತಿ ಕೂಡ ಪ್ರತಿ ದೂರು ದಾಖಲಿಸಿದ್ದಾರೆ.

ಕಾರಿಯಪ್ಪ ದೂರಿನಲ್ಲಿ ತನ್ನ ಮಾಜಿ ಪ್ರೇಯಸಿಯು ತನಗೆ ಹಾಗೂ ಕುಟುಂಬ ಸದಸ್ಯರಿಗೆ ಗಂಭೀರ ಪರಿಣಾಮಗಳ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಪ್ಪ ಬೆಂಗಳೂರಿನ ಆರ್​.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ ಬೆಂಗಳೂರಿನ ನಾಗಸಂದ್ರದ ರಾಮಯ್ಯ ಲೇಔಟ್ ನಿವಾಸಿಯಾಗಿರುವ 29 ವರ್ಷದ ಕೆ.ಸಿ ಕಾರ್ಯಪ್ಪ ಕೊಡಗಿನ 24 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ಆಂತರಿಕ ಕಲಹದಿಂದಾಗಿ ಈ ಜೋಡಿ ಹೆಚ್ಚು ಕಾಲ ಮುಂದುವರೆದಿರಲಿಲ್ಲ. ಡ್ರಗ್ ವ್ಯಸನಿ, ಕುಡಿತದ ಚಟ ಮತ್ತು ಅನೈತಿಕ ಸಂಬಂಧ ಹೊಂದಿದ್ದ ಕಾರಣ ನಾನು ಆಕೆಯಿಂದ ದೂರವಾಗಿದ್ದೆ ಎಂದು ಕೆ.ಸಿ ಕಾರ್ಯಪ್ಪ ತಿಳಿಸಿದ್ದಾರೆ.

ಆದರೆ ಈ ಬ್ರೇಕ್ ಅಪ್ ಬೆನ್ನಲ್ಲೇ ಡಿಸೆಂಬರ್ 31, 2022 ರಂದು ಯುವತಿ ಕೆಸಿ ಕಾರ್ಯಪ್ಪ ವಿರುದ್ಧ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಪ್ಪ ನನ್ನನ್ನು ಗರ್ಭಿಣಿ ಮಾಡಿದ್ದಾನೆ. ಆ ಬಳಿಕ ಸೆಪ್ಟೆಂಬರ್‌ನಲ್ಲಿ ತನಗೆ ಬಲವಂತವಾಗಿ ಗರ್ಭಪಾತ ಮಾತ್ರೆಗಳನ್ನು ತಿನ್ನಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ದೂರು ದಾಖಲಾಗಿ ಇದೀಗ ಒಂದು ವರ್ಷದ ಬಳಿಕ ಕೆಸಿ ಕಾರ್ಯಪ್ಪ ಗಂಭೀರ ಆರೋಪದೊಂದಿಗೆ ಯುವತಿ ವಿರುದ್ಧ ಆರ್​.ಟಿ ನಗರ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ಯುವತಿ ಗಂಭೀರ ಆರೋಪ
ಈ ಬಗ್ಗೆ ಮಾತನಾಡಿರುವ ದಿವ್ಯಾ, ಕಾರ್ಯಪ್ಪ ತನ್ನನ್ನು ಮದುವೆಯಾಗುವುದಾಗಿ ಹೇಳಿ ಪ್ರಕರಣವನ್ನು ಇತ್ಯರ್ಥ ಪಡಿಸಲು ಮನವೊಲಿಸಲು ಮುಂದಾಗಿದ್ದರು. ಅವರ ಕ್ರಿಕೆಟ್ ವೃತ್ತಿಜೀವನವನ್ನು ಪರಿಗಣಿಸಿ ನಾನು ಪೊಲೀಸರಿಗೆ ಯಾವುದೇ ಸಾಕ್ಷ್ಯವನ್ನು ನೀಡಲಿಲ್ಲ. ಇದೀಗ ನಾನು ಯಾವುದೇ ಸಾಕ್ಷ್ಯವನ್ನು ನೀಡದ ಕಾರಣ, ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಕಾರ್ಯಪ್ಪ ನೀಡಿದ ದೂರಿನ ಆಧಾರದ ಮೇಲೆ ನಾವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ವಿರುದ್ಧದ ದೂರಿನ ಬಗ್ಗೆ ತನಗೆ ಇನ್ನೂ ತಿಳಿದಿಲ್ಲ. ಆದರೆ ನನ್ನ ಹೋರಾಟ ಮುಂದುವರೆಯಲಿದೆ ಎಂದು ಯುವತಿ ತಿಳಿಸಿದ್ದಾರೆ.

ಕಾರಿಯಪ್ಪ ಆರೋಪ
ನಾನು ಮದ್ಯಪಾನ ತ್ಯಜಿಸುವಂತೆ ಆಕೆಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದೆ. ಆದರೆ ಆಕೆ ತನ್ನ ಮಾತಿಗೆ ಕಿವಿಗೊಡದ ಕಾರಣ ಬೇರ್ಪಡಲು ನಿರ್ಧರಿಸಿದ್ದಾಗಿ ಕಾರ್ಯಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತನ್ನ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಹೆಸರನ್ನು ಬರೆದು ಆತ್ಮಹತ್ಯೆ ಪತ್ರವನ್ನು ಹಾಕಿದ್ದಾಳೆ ಎಂದು ಕಾರ್ಯಪ್ಪ ಆರೋಪಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೆಸಿ ಕಾರ್ಯಪ್ಪ ಕೊಲ್ಕತ್ತಾ ನೈಟ್ ರೈಡರ್ಸ್​, ಪಂಜಾಬ್ ಕಿಂಗ್ಸ್​ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ. ಒಟ್ಟು 11 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕಾರ್ಯಪ್ಪ 8 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಇದೇ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅವರು ಅನ್​ಸೋಲ್ಡ್ ಆಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com