ಬೆಂಗಳೂರು ಹಿಟ್ ಅ್ಯಂಡ್ ರನ್ ಪ್ರಕರಣ: ವೈದ್ಯಕೀಯ ವಿದ್ಯಾರ್ಥಿ ಬಂಧನ

ಹಿಟ್ ಆ್ಯಂಡ್ ರನ್ ಪ್ರಕರಣವೊಂದರಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನ 20 ವರ್ಷದ ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರನ್ನು ಕೆಂಗೇರಿ ಸಂಚಾರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಿಟ್ ಆ್ಯಂಡ್ ರನ್ ಪ್ರಕರಣವೊಂದರಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನ 20 ವರ್ಷದ ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರನ್ನು ಕೆಂಗೇರಿ ಸಂಚಾರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರ್‌ವಿ ಕಾಲೇಜು ಮೆಟ್ರೊ ನಿಲ್ದಾಣದ ಪಕ್ಕದಲ್ಲಿ ರಸ್ತೆ ದಾಟುತ್ತಿದ್ದಾಗ ಎಂಬಿಎ ವಿದ್ಯಾರ್ಥಿನಿ 21 ವರ್ಷದ ಸ್ವಾತಿ ಎಂಬಾಕೆಗೆ ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಅತಿ ವೇಗವಾಗಿ ಬಂದಿದ್ದ ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ಕೆಳಗೆ ಸ್ವಾತಿ ಅವರು 50 ಮೀಟರ್ ದೂರಕ್ಕೆಹೋಗಿ ಬಿದ್ದಿದ್ದರು. ಪರಿಣಾಮ ಮೂಳೆ ಮುರಿತವಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡಿರುವ ಸ್ವಾತಿ, ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ ಎದುರು ಇರುವ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಐಎಂಎಸ್)ನಲ್ಲಿ ಮೊದಲ ವರ್ಷದ ಎಂಬಿಎ ಮಾಡುತ್ತಿದ್ದಾರೆ. ಸ್ವಾತಿ ಹುಬ್ಬಳ್ಳಿ ಮೂಲದವರಾಗಿದ್ದು, ಪಟ್ಟಣಗೆರೆಯ ಪೇಯಿಂಗ್ ಗೆಸ್ಟ್ ಹಾಸ್ಟೆಲ್ ನಲ್ಲಿ ವಾಸವಾಗಿದ್ದಾರೆ. ಇವರ ತಂದೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಬಂಧಿತ ವೈದ್ಯಕೀಯ ವಿದ್ಯಾರ್ಥಿಯನ್ನು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಕೃಷ್ಣ ಭಾರ್ಗವ್ ಎಂದು ಗುರ್ತಿಸಲಾಗಿದೆ. ಅಪಘಾತದ ಬಳಿಕ ಭಾರ್ಗವ್ ಕಾರು ನಿಲ್ಲಿಸದೆ ಪರಾರಿಯಾಗಿದ್ದರು. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೆಂಗೇರಿ ಪೊಲೀಸರು ಭಾರ್ಗವ್ ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ವಿದ್ಯಾರ್ಥಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಈ ನಡುವೆ ಘಟನೆ ಬಳಿಕ ಬಿಬಿಎಂಪಿಗೆ ಹಿಡಿಶಾಪ ಹಾಕಿದ ಸ್ಥಳೀಯರು, ಸ್ಪೀಡ್ ಬ್ರೇಕರ್ ತೆಗೆದುಹಾಕಿರುವುದರಿಂದ ಪಾದಚಾರಿಗಳಿಗೆ ಸ್ಥಳದಲ್ಲಿ ಅಪಾಯಗಳು ಎದುರಾಗುತ್ತಿದೆ. ಇದರಿಂದಾಗಿಯೇ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.

ಕಾರ್ಯಕ್ರಮವೊಂದಕ್ಕೆ ರಾಜಕಾರಣಿಗಳು ರಸ್ತೆಯಲ್ಲಿ ಸಂಚಾರ ಮಾಡುವ ಹಿನ್ನೆಲೆಯಲ್ಲಿ 8 ತಿಂಗಳ ಹಿಂದೆಯೇ ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್'ನ್ನು ತೆಗೆದು ಹಾಕಲಾಗಿತ್ತು ಎಂದು ಕೆಂಗೇರಿ ಸಂಚಾರ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com