

ಬೆಂಗಳೂರು: ಸಂಬಳ ನೀಡದ್ದಕ್ಕೆ ಖಿನ್ನತೆಗೊಳಗಾಗಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನು ಯಾರಿಗೂ ತಿಳಿಯದಂತೆ ಸಮಾಧಿ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್ ರಂಜಾನ್ (40) ಮತ್ತು ರಸೆಲ್ (24) ಬಂಧಿತ ವ್ಯಕ್ತಿಯಾಗಿದ್ದಾರೆ. ಜ.14ರಂದು ಸೀಗೇಹಳ್ಳಿ ಹೆಚ್.ಪಿ.ಪೆಟ್ರೋಲ್ ಬಂಕ್ ಹಿಂಭಾಗದ ಕಾರ್ಮಿಕರ ಶೆಟ್ ನಲ್ಲಿ ಪಶ್ಚಿಮ ಬಂಗಾಳ ಮೂಲಕ ಎಂ.ಡಿ.ರಸೂಲ್ ಹವಾಲ್ದಾರ್ (30) ಆತ್ಮಹತ್ಯೆ ಮಾಡಿಕೊಂಡಿದ್ದ. ಆರೋಪಿಗಳು ಈ ವಿಚಾರವನ್ನು ಯಾರಿಗೂ ಹೇಳದಂತೆ ಇತರೆ ಕಾರ್ಮಿಕರಿಗೆ ಬೆದರಿಸಿ, ಮೃತದೇಹವನ್ನು ಖಾಜಿಸೊನ್ನೇನಹಳ್ಳಿಯ ಖಬರಸ್ತಾನದಲ್ಲಿ ಹೂತಿದ್ದರು.
ಈ ಸಂಬಂಧ ಮೃತ ಎಂ.ಡಿ.ರಸೂಲ್ ಸಂಬಂಧಿ ಆಚಿಮನ್ ಶೇಖ್ ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯದ ಅನುಮತಿ ಮೇರೆಗೆ ಫೆಬ್ರವರಿ 4ರಂದು ಶವವನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿ ಕಳೆದ 4 ವರ್ಷಗಳಿಂದ ಆರೋಪಿ ರಂಜಾನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳಿನಿಂದ ರಂಜಾನ್ ವೇತನವನ್ನು ನೀಡಿಲ್ಲ. ವೇತನ ಕೇಳಿದರೆ ಹಲ್ಲೆ ನಡೆಸಿ ಗದರಿಸಿದ್ದಾರೆ. ಇದರಿಂದ ಮನನೊಂದು ಶೆಡ್ ನಲ್ಲಿ ನೇಣು ಬಿಗಿದುಕೊಂಡು ರಸೂಲ್ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement