ಬೆಂಗಳೂರು: ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿಚ್ಛೇದಿತ ಮಹಿಳೆಯ ಕೊಲೆ, ಆರೋಪಿ ಮೆಕ್ಯಾನಿಕ್ ಬಂಧನ
ಬೆಂಗಳೂರು: ವಿವಾಹವಾಗಲು ನಿರಾಕರಿಸಿದ್ದಕ್ಕೆ ವಿಚ್ಛೇದಿತ ಮಹಿಳೆಯನ್ನು ಕೊಂದಿದ್ದ ಮೆಕ್ಯಾನಿಕ್ ಒಬ್ಬನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು, ಸಂತ್ರಸ್ತೆಯ ಮನೆಯ ಹೊರಗೆ ಸೋಮವಾರ ಮಧ್ಯಾಹ್ನ ಚಾಕುವಿನಿಂದ ಇರಿದು ಕೊಂದಿದ್ದ.
ಆರೋಪಿಯನ್ನು ನದೀಂ ಪಾಷಾ (37) ಮತ್ತು ಸಂತ್ರಸ್ತೆ ಕೌಸರ್ ಮುಬೀನಾ ಎಂದು ಗುರುತಿಸಲಾಗಿದೆ. ಮೊದಲು ಆಟೋ ಚಾಲಕನಾಗಿದ್ದ ನದೀಂ ನಂತರ ವಿದೇಶಕ್ಕೆ ಹೋಗಿದ್ದ. ಹಿಂದಿರುಗಿದ ನಂತರ, ಆತ ಮೆಕ್ಯಾನಿಕ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದ.
2009 ರಲ್ಲಿ ಸಂತ್ರಸ್ತೆ ಮಂಡ್ಯದಲ್ಲಿ ವಸೀಂ ಪಾಷಾ ಎಂಬುವವರನ್ನು ವಿವಾಹವಾಗಿದ್ದರು ಮತ್ತು 11 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು. ನಂತರ ಸಂತ್ರಸ್ತೆ ತನ್ನ ಮಗಳೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿ, ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು.
ಮಂಡ್ಯ ಮೂಲದ ನದೀಂ ಎಂಬಾತ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆಕೆಯನ್ನು ಭೇಟಿಯಾಗಲು ಮಂಡ್ಯದಿಂದ ನಗರಕ್ಕೆ ಬರುತ್ತಿದ್ದ. ಸಂತ್ರಸ್ತೆ ಮತ್ತು ಆಕೆಯ ಸಂಬಂಧಿಕರು ಎರಡನೇ ಮದುವೆಯನ್ನು ಇಷ್ಟಪಡದ ಕಾರಣ, ಅವಳು ಆತನನ್ನು ಮದುವೆಯಾಗಲು ನಿರಾಕರಿಸಿದಳು. ಇದರಿಂದ ಹತಾಶೆಗೊಂಡ ಆತ ಸಂತ್ರಸ್ತೆಯನ್ನು ಕೊಂದಿದ್ದಾನೆ ಎನ್ನಲಾಗಿದೆ.
ಇವರಿಬ್ಬರು ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದು ನಂತರ ಬೇರೆಯಾದರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಹತ್ಯೆಯಾಗುವ ಮೂರು ದಿನಗಳ ಮೊದಲು ಸಂತ್ರಸ್ತೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಆರೋಪಿ ಆಕೆಗೆ ಬೆಳ್ಳಿಯ ಕಾಲುಂಗುರವನ್ನು ಉಡುಗೊರೆಯಾಗಿ ನೀಡಿದ್ದನು. ಚಿನ್ನದ ಸರ ನೀಡದ ಹಿನ್ನೆಲೆಯಲ್ಲಿ ಆಕೆ ಮನನೊಂದಿದ್ದಳು. ಇದೇ ವಿಚಾರವಾಗಿ ಜಗಳ ನಡೆದಿದ್ದು ಕೊಲೆಗೆ ಒಂದು ಕಾರಣ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ