ಕೆ.ಎಸ್.ಆರ್.ಟಿ.ಸಿ ವತಿಯಿಂದ ನೂತನವಾಗಿ ಪರಿಚಯಿಸಿರುವ ಅಂತರ-ನಗರ (Prototype) ಎಲೆಕ್ಟ್ರಿಕ್ ಬಸ್ ಗಳಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಕೆ.ಎಸ್.ಆರ್.ಟಿ.ಸಿ ವತಿಯಿಂದ ನೂತನವಾಗಿ ಪರಿಚಯಿಸಿರುವ ಅಂತರ-ನಗರ (Prototype) ಎಲೆಕ್ಟ್ರಿಕ್ ಬಸ್ ಗಳಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಲಾಯಿತು.

ಕೆಎಸ್ಆರ್‌ಟಿಸಿಗೆ ಎಂಟ್ರಿ ಕೊಟ್ಟ ಮೊದಲ ಎಲೆಕ್ಟ್ರಿಕ್ ಬಸ್: ಫೆಬ್ರವರಿ ವೇಳೆಗೆ ಕಾರ್ಯಾಚರಣೆ ಆರಂಭ ಸಾಧ್ಯತೆ

ಡಿಸೇಲ್ ವಾಹನಗಳ ಕಾಲ ಮುಗಿಯುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಕಾರುಬಾರು ಶುರುವಾಗುತ್ತಿದೆ. ಈಗಾಗಲೆ ಬಿಎಂಟಿಸಿಗೆ ಎಂಟ್ರಿ ಕೊಟ್ಟಿರುವ ಎಲೆಕ್ಟ್ರಿಕ್ ಬಸ್ ಗಳು ಇದೀಗ ಕೆಎಸ್ಆರ್ಟಿಸಿಗೂ ಲಗ್ಗೆ ಇಟ್ಟಿದೆ.
Published on

ಬೆಂಗಳೂರು; ಡಿಸೇಲ್ ವಾಹನಗಳ ಕಾಲ ಮುಗಿಯುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಕಾರುಬಾರು ಶುರುವಾಗುತ್ತಿದೆ. ಈಗಾಗಲೆ ಬಿಎಂಟಿಸಿಗೆ ಎಂಟ್ರಿ ಕೊಟ್ಟಿರುವ ಎಲೆಕ್ಟ್ರಿಕ್ ಬಸ್ ಗಳು ಇದೀಗ ಕೆಎಸ್ಆರ್ಟಿಸಿಗೂ ಲಗ್ಗೆ ಇಟ್ಟಿದೆ.

ಈಗಾಗಲೇ ಬೆಂಗಳೂರಿನಲ್ಲಷ್ಟೇ ಹವಾ ಸೃಷ್ಟಿಸಿರುವ ಎಲೆಕ್ಟ್ರಿಕ್ ಬಸ್ ಗಳು ಶೀಘ್ರದಲ್ಲಿಯೇ ಮೈಸೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲೂ ಹವಾ ಸೃಷ್ಟಿಸಲಿದೆ.

ಶನಿವಾರ ಮೊದಲ ಎಲೆಕ್ಟ್ರಿಕ್ ಬಸ್ಸೊಂದು ಕೆಎಸ್ಆರ್‌ಟಿಸಿ ಕೈಸೇರಿದ್ದು, ಪರೀಕ್ಷಾರ್ಥ ಸಂಚಾರ ಶೀಘ್ರದಲ್ಲಿಯೇ ಆರಂಭವಾಗಲಿದೆ. ಪ್ರಾಯೋಗಿಕ ಚಾಲನೆಯು ಬೆಂಗಳೂರು ಮತ್ತು ಮೈಸೂರು ನಡುವೆ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

ಜನವರಿ-ಫೆಬ್ರವರಿ ವೇಳೆಗೆ ಐವತ್ತು ಬಸ್‌ಗಳು, ಆರು ಇಂಟರ್‌ಸಿಟಿ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. 12 ಮೀ ಇ-ಬಸ್ ಅನ್ನು ಖಾಸಗಿ ಕಂಪನಿ ಒಲೆಕ್ಟ್ರಾ ಒಟ್ಟು ವೆಚ್ಚದ ಗುತ್ತಿಗೆ ಆಧಾರದ ಮೇಲೆ ನಿರ್ವಹಿಸುತ್ತದೆ.

ಎಸಿ ಬಸ್ 43 ಪುಶ್-ಬ್ಯಾಕ್ ಸೀಟ್‌ಗಳನ್ನು ಹೊಂದಿದೆ. ಆನ್‌ಬೋರ್ಡ್ ಮತ್ತು ಆಫ್‌ಬೋರ್ಡ್ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಒಂದೇ ಚಾರ್ಜ್‌ನಲ್ಲಿ 300 ಕಿಮೀ ವರೆಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಲಿ-ಐಯಾನ್ ಫಾಸ್ಫೇಟ್ ಬ್ಯಾಟರಿಯನ್ನು ಎರಡರಿಂದ ಮೂರು ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಯುಎಸ್‌ಬಿ ಚಾರ್ಜರ್ ಪೋರ್ಟ್ ಹೊಂದಿರುವ ಬಸ್‌ನಲ್ಲಿ ಪ್ರಯಾಣಿಕರು ವೈಫೈ ಅನ್ನು ಕೂಡ ಬಳಸಬಹುದಾಗಿದೆ.

ಎಲೆಕ್ಟ್ರಿಕ್ ಬಸ್ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಶ್ರೀರಾಮುಲು ಅವರು, ಕೇಂದ್ರ ಸರ್ಕಾರದ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಫೇಮ್ II) ಯೋಜನೆಯಡಿಯಲ್ಲಿ ಕೆಎಸ್‌ಆರ್‌ಟಿಸಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಇದು ಮಾಲೀನ್ಯವನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಪ್ರಗತಿಪರ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

2030 ರ ವೇಳೆಗೆ ಎಲ್ಲಾ ಬಸ್ ಗಳನ್ನು ಸಂಪೂರ್ಣ ಎಲೆಕ್ಟ್ರಿಕ್ ಬಸ್ ಗಳಾಗಿ ಪರಿವರ್ತಿಸಲು ಯೋಜನೆಗಳಿವೆ ಎಂದು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ನೌಕರರ ಬಹುಕಾಲದಿಂದ ಬಾಕಿ ಉಳಿದಿರುವ ವೇತನ ಹೆಚ್ಚಳದ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಶೀಘ್ರವೇ ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಶ್ರೀರಾಮುಲು ಅವರು ಇದೇ ವೇಳೆ ಹೇಳಿದ್ದಾರೆ.

ಎಲೆಕ್ಟ್ರಿಕ್ ಬಸ್‌ಗಳ ಹೆಸರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅನೇಕ ಉತ್ತರಗಳು ಬಂದಿವೆ, ನಾವು 'ಇ-ಎಕ್ಸ್‌ಪೀರಿಯೆನ್ಸ್ ಇ-ಲೆವೇಟ್' ಎಂಬ ಅಡಿಬರಹದೊಂದಿಗೆ 'ಇವಿ ಪವರ್ ಪ್ಲಸ್' ಹೆಸರನ್ನು ಆಯ್ಕೆ ಮಾಡಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗಕ್ಕೆ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗಲಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ. ಶೀಘ್ರದಲ್ಲಿಯೇ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗದಲ್ಲಿ ಶೀಘ್ರದಲ್ಲಿಯೂ ಈ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com