ಸಂಚಾರ ದಟ್ಟಣೆಗೆ ನನ್ನ ಸೊಸೆ, ಮೊಮ್ಮಗನ ಸಾವೇ ಕಾರಣ ಎಂಬ ಸಣ್ಣ ಸುಳಿವೂ ಇರಲಿಲ್ಲ: ಮೃತ ತೇಜಸ್ವಿನಿ ಮಾವ
ಬೆಂಗಳೂರು: ಎಚ್‌ಬಿಆರ್ ಲೇಔಟ್ನಲ್ಲಿ ಆಗಿರುವ ಸಂಚಾರ ದಟ್ಟಣೆಗೆ ನನ್ನ ಕುಟುಂಬದವರು ಮೃತಪಟ್ಟಿದ್ದೇ ಕಾರಣ ಎಂಬ ಸಣ್ಣ ಸುಳಿವೂ ನನಗಿರಲಿಲ್ಲ ಎಂದು ಮೆಟ್ರೋ ಪಿಲ್ಲರ್ ದುರಂತ ಪ್ರಕರಣದಲ್ಲಿ ಮೃತಪಟ್ಟ ತೇಜಸ್ವಿನಿ ಅವರ ಮಾವ ವಿಜಯ್ಕುಮಾರ್ ಕಣ್ಣೀರು ಹಾಕಿದ್ದಾರೆ.
ಎಚ್‌ಬಿಆರ್ ಲೇಔಟ್‌ನ ಹೊರ ವರ್ತುಲ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ ಬಿದ್ದ ಪರಿಣಾಮ ವಿಜಯ್ ಕುಮಾರ್ ಅವರು ತಮ್ಮ ಸೊಸೆ ಮತ್ತು 2.6 ವರ್ಷದ ಮೊಮ್ಮಗನನ್ನು ಕಳೆದುಕೊಂಡಿದ್ದಾರೆ.
ಮೆಟ್ರೋ ಪಿಲ್ಲರ್ ಕುಸಿದಿದೆ ಎಂಬುದು ನನಗೆ ತಿಳಿದಿರಲಿಲ್ಲ. ಆಗಾಗ ಇಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದು ಸಹಜ ಎಂದು ನಾನು ಭಾವಿಸಿದೆ, ಆದರೆ ಆ ಪಿಲ್ಲರ್ ನನ್ನ ಮೊಮ್ಮಗ ಹಾಗೂ ಸೊಸೆಯನ್ನು ಬಲಿತೆಗೆದುಕೊಂಡಿದೆ ಎಂಬುದು ತಿಳಿದಿರಲಿಲ್ಲ.
ನಾನು ತೀವ್ರ ದುಃಖದಲ್ಲಿದ್ದೇನೆ, ಇದು ನನಗೆ ಭರಿಸಲಾರದ ನಷ್ಟ. ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿರುವಾಗ ಪಿಲ್ಲರ್ನ ಹತ್ತಿರದ ಕನಿಷ್ಠ 30 ಮೀಟರ್ಗಳವರೆಗೆ ಹೋಗಲು ಯಾರಿಗೂ ಅವಕಾಶ ನೀಡಬಾರದು, ಆದರೆ ವಾಹನಗಳು 5-10 ಅಡಿಗಳ ಒಳಗೆ ಚಲಿಸುತ್ತವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಕುಟುಂಬದ ಜೀವಗಳು ಹೋಗಿವೆ. ನಮ್ಮ ಕುಟುಂಬ ಅನುಭವಿಸಿದ ನೋವು ಇನ್ನಾವುದೇ ಕುಟುಂಬಕ್ಕೂ ಎದುರಾಗಬಾರದು, ಸರ್ಕಾರ ಕೂಡಲೇ ಬಿಎಂಆರ್'ಸಿಎಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸುರಕ್ಷತಾ ಕ್ರಮ ತೆಗೆದುಕೊಳ್ಳದೆ ಮೆಟ್ರೋ ಕಾಮಗಾರಿ ನಡೆಸಿದ್ದರಿಂದಲೇ ಈ ದುರಂತ ಸಂಭವಿಸಿದೆ. ಬೇರೆಯವರ ನಿರ್ಲಕ್ಷ್ಯಕ್ಕೆ ನಮ್ಮ ಕುಟುಂಬದ ಸದಸ್ಯರು ಬಲಿಯಾಗಿದ್ದಾರೆ. ನಮ್ಮ ಸೊಸೆ ಹಾಗೂ ಮೊಮ್ಮಗನ ಸಾವಿಗೆ ಬಿಎಂಆರ್'ಸಿಎಸ್ ನಿರ್ಲಕ್ಷ್ಯವೇ ಕಾರಣ. ಈಗ ನಮಗೆ ಸರ್ಕಾರ ರೂ.20 ಲಕ್ಷ ಪರಿಹಾರ ಕೊಟ್ಟರೆ ಹೋದ ಜೀವಗಳು ಮತ್ತೆ ಸಿಗುತ್ತವೆಯೇ? ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ವಿಸ್ಮಿತಾಳಂತೆಯೇ ವಿಹಾನ್ ನನ್ನನ್ನು ಬಹಳ ಹಚ್ಚಿಕೊಂಡಿದ್ದ. ನಮ್ಮನ್ನು ನೋವನ್ನು ಯಾರಿಗೆ ಹೇಳುವುದು ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ