8 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಆಗಮನ: 'ಬೂಸ್ಟರ್ ಡೋಸ್' ಅಭಿಯಾನ ಆರಂಭಕ್ಕೆ ಸರ್ಕಾರ ಸಿದ್ಧತೆ

ಸಾಕಷ್ಟು ವಿಳಂಬದ ನಂತರ 8 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳು ರಾಜ್ಯಕ್ಕೆ ಆಗಮಿಸಿದ್ದು, ಈ ವಾರಾಂತ್ಯದಿಂದ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸರ್ಕಾರ ಸಿದ್ಧತೆಗಳ ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾಕಷ್ಟು ವಿಳಂಬದ ನಂತರ 8 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳು ರಾಜ್ಯಕ್ಕೆ ಆಗಮಿಸಿದ್ದು, ಈ ವಾರಾಂತ್ಯದಿಂದ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸರ್ಕಾರ ಸಿದ್ಧತೆಗಳ ನಡೆಸುತ್ತಿದೆ.

ಜನವರಿಯೊಳಗಾಗಿ ಬೂಸ್ಟರ್ ಡೋಸ್ ಲಸಿಕೆಯಲ್ಲಿ ಶೇ.50ರಷ್ಟು ಗುರಿ ತಲುಪಬೇಕೆಂದು ಡಾ.ಸುಧಾಕರ್ ಅವರು ಸೂಚಿಸಿದ್ದರು. ಆದರೆ, ಲಸಿಕೆಗಳ ಕೊರತೆಯಿಂದಾಗಿ ಈ ಗುರಿ ಮುಟ್ಟಲು ಸಾಧ್ಯವಾಗಿಲಿಲ್ಲ.

ಸಾಕಷ್ಟು ಕಡೆ ಕೋವ್ಯಾಕ್ಸಿನ್ ಲಸಿಕೆಗಳಿದ್ದು, ಕೋವಿಶೀಲ್ಡ್ ಹಾಗೂ ಹೆಟೆರೊಲಾಜಸ್ ಕಾರ್ಬೆವಾಕ್ಸ್ ಲಸಿಕೆಗಳ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ವಿಶೇಷ ಲಸಿಕೆ ಅಭಿಯಾನ ಸ್ಥಗಿತಗೊಳ್ಳುವಂತಾಗಿತ್ತು. ಬೇಡಿಕೆಗಳು ಇಲ್ಲದಿದ್ದ ಕಾರಣ ಕೇಂದ್ರ ಸರ್ಕಾರದ ಬಳಿ ರಾಜ್ಯ ಸರ್ಕಾರ ಮನವಿ ಇಟ್ಟಿರಲಿಲ್ಲ. ಇದೀಗ ಚೀನಾ, ಅಮೆರಿಕಾ ಹಾಗೂ ಇತರೆ ದೇಶಗಳಲ್ಲಿ ಸೋಂಕು ಹೆಲ್ಲಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ, ಕೋವಿಶೀಲ್ಡ್ ಲಸಿಕೆ ಲಭ್ಯವಿರದ ಕುರಿತಂತೆಯೂ ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ 30 ಲಕ್ಷ ಡೋಸ್ ಲಸಿಕೆಗಳ ರವಾನಿಸುವಂತೆ ಕೇಂದ್ರ ಬಳಿ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು.

ಆರೋಗ್ಯ ಆಯುಕ್ತ ಡಿ.ರಂದೀಪ್ ಮಾತನಾಡಿ, ರಾಜ್ಯದಲ್ಲಿ 8 ಲಕ್ಷ ಕೋವಿಶೀಲ್ಡ್ ಡೋಸ್ ಬಂದಿದ್ದು, ಶೀಘ್ರದಲ್ಲಿಯೇ ವಿಶೇಷ ಲಸಿಕೆ ಅಭಿಯಾನ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನವೀನ್ ಭಟ್ ಮಾತನಾಡಿ, ಬುಧವಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಲಸಿಕೆಗಳ ವಿತರಿಸಲಾಗುತ್ತದೆ. ಈ ತಿಂಗಳೊಳಗೆ 8 ಲಕ್ಷ ಲಸಿಕೆಗಳನ್ನು ನೀಡಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ ಗುರುವಾರ ಅಥವಾ ವಾರಾಂತ್ಯದ ವೇಳೆಗೆ ವಿಶೇಷ ಲಸಿಕೆ ಅಭಿಯಾನಗಳು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಜನರು ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳುವಂತೆ ಉತ್ತೇಜನ ನೀಡಲು ದೊಡ್ಡ ಮಟ್ಟದಲ್ಲಿ ವಿಶೇಷ ಅಭಿಯಾನಗಳ ನಡೆಸಲಾಗುತ್ತದೆ. ಶೇ.75-80ರಷ್ಟು ಲಸಿಕೆಗಳನ್ನು ನೀಡಿದ ಬಳಿಕ ಕೇಂದ್ರ ಬಳಿ ಮತ್ತಷ್ಟು ಲಸಿಕೆಗೆ ಬೇಡಿಕೆಗಳನ್ನು ಇಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com