ಕಳಸಾ ಬಂಡೂರಿ ಯೋಜನೆ: ಗೋವಾ ಸರ್ಕಾರದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ಬೆಳಗಾವಿ: ಕಳಸಾ ಬಂಡೂರಿ ಯೋಜನೆ ಜಾರಿಗೆ ಮುಂದಾಗಿರುವ ಕರ್ನಾಟಕ ಸರ್ಕಾರಕ್ಕೆ ತಡೆ ನೀಡುವಂತೆ ಕೋರಿ ಗೋವಾ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಗೆ ನೀಡಿದೆ.
ಕಳಸಾ ಬಂಡೂರಿ ಯೋಜನೆ ಸಂಬಂಧ ಕರ್ನಾಟಕ ಡಿಪಿಆರ್'ಗೆ ಕೇಂದ್ರ ಜಲ ಆಯೋಗವು ಒಪ್ಪಿಗೆ ನೀಡಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಜನವರಿ 14 ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಸೆಕ್ಷನ್ 29ರ ಪ್ರಕಾರ ವನ್ಯಜೀವಿ ಅಭಯಾರಣ್ಯಗಳಲ್ಲಿ ನೀರು ಹರಿಸುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂಬ ಕಾನೂನು ಆಧಾರದಲ್ಲಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲು ನಿರ್ಧರಿಸಿದೆ.
ಮಹದಾಯಿ ಜಲಾನಯನ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಲು ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಸೇರಿದಂತೆ ಎಲ್ಲಾ ಅಗತ್ಯ ಅನುಮೋದನೆಗಳು ಬೇಕಾಗುತ್ತದೆ ಎಂದು ಮಹದಾಯಿ ಜಲ ವಿವಾದ ನ್ಯಾಯಮಂಡಳಿ ಷರತ್ತು ವಿಧಿಸಿದೆ ಎಂದು ಗೋವಾ ಸರ್ಕಾರ ವಾದಿಸುತ್ತಿದೆ. ಮಹದಾಯಿ ಜಲಾನಯನ ಪ್ರದೇಶದಿಂದ ಮಹದಾಯಿ ವನ್ಯಜೀವಿ ಅಭಯಾರಣ್ಯದ ಮೂಲಕ ನೀರು ಹರಿಸುವುದನ್ನು ಕೇಂದ್ರದ ಒಪ್ಪಿಗೆಯ ಮೂಲಕವಷ್ಟೇ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂಬುದು ಗೋವಾ ಸರ್ಕಾರದ ವಾದವಾಗಿದೆ.
ಅರ್ಜಿಯನ್ನು ಶೀಘ್ರಗತಿಯ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್'ನ ಮುಖ್ಯ ನ್ಯಾಯಾಧೀಶರು ತಿಳಿಸಿದ್ದು, ಸಂಜೆ ವೇಳೆಗೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ