ಬೆಂಗಳೂರು: ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸುಪ್ರೀಂ ಕೋರ್ಟ್ ವಕೀಲರ ಮೇಲೆ ಹಲ್ಲೆ, ಫೋನ್ ಕಸಿದು ಪರಾರಿ!

ಬಳ್ಳಾರಿಯಲ್ಲಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿರುವ 52 ವರ್ಷದ ಸುಪ್ರೀಂ ಕೋರ್ಟ್ ವಕೀಲರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆಯೊಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಳ್ಳಾರಿಯಲ್ಲಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿರುವ 52 ವರ್ಷದ ಸುಪ್ರೀಂ ಕೋರ್ಟ್ ವಕೀಲರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆಯೊಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

ದಾಸರಿ ಗೋವಿಂದ್ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವಕೀಲರಾಗಿದ್ದಾರೆ. ದಾಸರಿ ಗೋವಿಂದ್ ಅವರು, ಮಂಗಳಾರ ರಾತ್ರಿ 9.15-9.45ರ ಸುಮಾರಿಗೆ ಮೆಟ್ರೋ ನಿಲ್ದಾಣದಿಂದ ಜಾಲಹಳ್ಳಿ ಕ್ರಾಸ್‌ನಲ್ಲಿರುವ ವೈಷ್ಣವಿ ಗಾರ್ಡೇನಿಯಾ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ಮೆಟ್ರೋ ನಿಲ್ದಾಣದಿಂದ ಅಪಾರ್ಟ್'ಮೆಂಟ್'ಗೆ ಹಿಂತಿರುಗುತ್ತಿದ್ದೆ. ರಾತ್ರಿ ಸುಮಾರು 9.15 ಸಮಯವಾಗಿತ್ತು. ಫೋನ್ ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ, ವ್ಯಕ್ತಿಯೊಬ್ಬ ಎದುರಿಗೆ ಬಂದು ಫೋನ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ. ಈ ವೇಳೆ ಆತನನ್ನು ಹಿಡಿಯಲು ಹೋದಾಗ ಮತ್ತೊಬ್ಬ ವ್ಯಕ್ತಿ ಆತನ ಸಹಾಯಕ್ಕೆ ಬಂದ. ಇಬ್ಬರೂ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದರು. ನಂತರ ಓರ್ವ ನನ್ನ ಜೇಬಿನಲ್ಲಿದ್ದ ಹಣವನ್ನೂ ತೆಗೆದುಕೊಂಡು ಪರಾರಿಯಾಗಲು ಆರಂಭಿಸಿದರು. ಇಬ್ಬರ ಬೆನ್ನಟ್ಟಿ ಓರ್ವನನ್ನು ಹಿಡಿಯವಲ್ಲಿ ಯಶಸ್ವಿಯಾದೆ. ಆದರೆ, ಫೋನ್ ಹಾಗೂ ದುಡ್ಡು ಕಸಿದಿದ್ದ ಮತ್ತೋರ್ವ ಆರೋಪಿ ಪರಾರಿಯಾಗುವಲ್ಲಿ ಯಶಸ್ವಿಯಾದ.

ಓರ್ವ ಆರೋಪಿಯನ್ನು ಹಿಡಿದ ಬಳಿಕ ದಾರಿಹೋಕರು ನನ್ನ ನೆರವಿಗೆ ಧಾವಿಸಿದರು. ಅದೃಷ್ಟಕ್ಕೆ ಸ್ಥಳದಲ್ಲಿ ಪೊಲೀಸರು ಗಸ್ತು ತಿರುತ್ತಿದ್ದರು. ಈ ವೇಳೆ ಆರೋಪಿಯನ್ನು ಅವರ ವಶಕ್ಕೆ ನೀಡಿದೆವು ಎಂದು ದಾಸರಿ ಗೋವಿಂದ್ ಅವರು ಹೇಳಿದ್ದಾರೆ.

ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರೂ, ಅವರ ಬೆನ್ನಟ್ಟಿ ಓರ್ವ ಆರೋಪಿಯನ್ನು ಹಿಡಿದಿದ್ದಾರೆ, ವಕೀಲರ ಈ ಧೈರ್ಯವನ್ನು ಮೆಚ್ಚಲೇಬೇಕೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 397 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪೀಣ್ಯ ಉಪ ವಿಭಾಗದ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.

ದಾಸರಿ ಗೋವಿಂದ್ ಅವರು, ಕೆಆರ್ ಪುರಂ ತಹಸೀಲ್ದಾರ್ ಅಜಿತ್ ಕುಮಾರ್ ರೈ ಅವರ ಬಂಧನಕ್ಕೆ ಲೋಕಾಯುಕ್ತ ಪೊಲೀಸ್ ತಂಡದ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ಅಶೋಕ್ ವೆಂಕಟ್ ಅವರ ಚಿಕ್ಕಪ್ಪ ಆಗಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com