ಸಿದ್ದು ಬಜೆಟ್ ಮಂಡನೆ ವೇಳೆ ಸದನದಲ್ಲಿ ಶಾಸಕರ ಜಾಗದಲ್ಲಿ 15 ನಿಮಿಷ ಕೂತಿದ್ದ ವ್ಯಕ್ತಿ ಬಂಧನ: ಪೊಲೀಸರಿಂದ ವಿಚಾರಣೆ

ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವ ವೇಳೆ ಭದ್ರತಾ ಲೋಪವಾಗಿದ್ದು, ಸದನದಲ್ಲಿ ಶಾಸಕರ ಜಾಗದಲ್ಲಿ 15 ನಿಮಿಷ ಕೂತಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ವಿಧಾನಸೌಧ ಪೊಲೀಸರು
ವಿಧಾನಸೌಧ ಪೊಲೀಸರು

ಬೆಂಗಳೂರು: ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವ ವೇಳೆ ಭದ್ರತಾ ಲೋಪವಾಗಿದ್ದು, ಸದನದಲ್ಲಿ ಶಾಸಕರ ಜಾಗದಲ್ಲಿ 15 ನಿಮಿಷ ಕೂತಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬಿಗಿ ಭದ್ರತೆಯಿದ್ದರೂ ಅನಾಮಧೇಯ ವ್ಯಕ್ತಿಯೊಬ್ಬ ಆರಾಮಾಗಿ ವಿಧಾನಸಭೆಗೆ ಪ್ರವೇಶಿಸಿ ಶಾಸಕರ ಸ್ಥಾನದಲ್ಲಿ ಕುಳಿತಿದ್ದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಆ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕರಿಯಪ್ಪ ಅಲಿಯಾಸ್ ತಿಪ್ಪೆರುದ್ರ ಎಂದು ಗುರುತಿಸಲಾಗಿದೆ.

ಸುಮಾರು 15 ನಿಮಿಷಗಳ ಕಾಲ ಶಾಸಕರ ಜಾಗದಲ್ಲಿ ಕುಳಿತಿದ್ದ ಕರಿಯಪ್ಪ ನಂತರ ಎದ್ದು ಹೋಗಿದ್ದಾನೆ. ದೇವದುರ್ಗ ಶಾಸಕಿ ಕರೆಮ್ಮ ಅವರ ಸೀಟಿನಲ್ಲಿ ಕುಳಿತಿದ್ದ. ಗುರುಮಿಠಕಲ್ ಶಾಸಕ ಶರಣಗೌಡ ಕುಂದಕೂರ್ ಇದನ್ನು ಗಮನಿಸಿದ್ದು, ಈ ಬಗ್ಗೆ ಮಾರ್ಷಲ್ ಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಸಕ ಶರಣಗೌಡ ಕುಂದಕೂರ್, "ಜಿ.ಟಿ. ದೇವೇಗೌಡರ ಬಳಿ ಆತ ಗೊತ್ತಾ ಎಂದು ಕೇಳಿದೆ, ಅವರು ಯಾರೋ ಗೊತ್ತಿಲ್ಲ ಎಂದರು. ನಾನೇ ಹೋಗಿ ಆತನ ಬಳಿ ಪ್ರಶ್ನೆ ಮಾಡಿದ್ದಕ್ಕೆ ನಾನು ಮೊಳಕಾಲ್ಮೂರು ಶಾಸಕ ಎಂದು ಹೇಳಿದ, ಇದನ್ನು ಸ್ಪೀಕರ್ ಯು.ಟಿ. ಖಾದರ್ ಗಮನಕ್ಕೆ ತಂದಿದ್ದೇನೆ. ಬಳಿಕ ಮಾರ್ಷಲ್ ಗಳು ಆತನನ್ನು ಹೊರಗೆ ಕರೆದೊಯ್ದರು" ಎಂದು ಹೇಳಿದ್ದಾರೆ.

ವಿಧಾನಸಭೆಗೆ ವ್ಯಕ್ತಿಯೊಬ್ಬ ನುಸುಳಿದ್ದೂ ಐತಿಹಾಸಿಕ ಘಟನೆಯೇ: ಶಾಸಕ ಕಂದಕೂರು ವ್ಯಂಗ್ಯ
ಸಿದ್ದರಾಮಯ್ಯ ಅವರು ತಮ್ಮ ಐತಿಹಾಸಿಕ 14ನೇ ಬಾರಿಗೆ ಬಜೆಟ್ ಮಂಡಿಸಿದ ದಿನವೇ ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ ವ್ಯಕ್ತಿಯೊಬ್ಬರು ನುಸುಳಿರುವ ಐತಿಹಾಸಿಕ ಘಟನೆಯೂ ನಡೆದಿದೆ ಎಂದು ಕಂದಕೂರು ವ್ಯಂಗ್ಯವಾಡಿದರು.

ಮಾರ್ಷಲ್ಸ್‌ಗೆ ಆವಾಜ್ ಹಾಕಿದ್ದ ಕರಿಯಪ್ಪ
ಬಜೆಟ್ ಮಂಡನೆ ವೇಳೆ ಕರಿಯಪ್ಪ ನೇರವಾಗಿ ವಿಧಾನಸೌಧಕ್ಕೆ ಪ್ರವೇಶಿಸಿದ್ದಾರೆ. ಪ್ರವೇಶ ಜಾಗದಲ್ಲಿ ಮಾರ್ಷಲ್ಸ್ ಕರಿಯಪ್ಪನವರನ್ನು ಪ್ರಶ್ನೆ ಮಾಡಿದಾಗ, ನಾನು ಶಾಸಕ ಗೊತ್ತಾಗಲ್ವಾ ಎಂದು ಆವಾಜ್ ಕೂಡ ಹಾಕಿದ್ದಾರೆ. ಗುರುತಿನ ಚೀಟಿ ಕೇಳಿದಾಗ, ನಾನು ಮೊಳಕಾಲ್ಮೂರು ಶಾಸಕ ಯಾಕ್ರೀ ನಿಮಗೆ ಐಡಿ, ಐಡಿ ಕಾರಿನ ಬಳಿ ಇದೆ ಎಂದು ಜೋರಾಗಿಯೇ ಹೇಳಿದ್ದಾರೆ.

ಇದನ್ನು ನಂಬಿದ ಮಾರ್ಷಲ್‌ಗಳು ಕರಿಯಪ್ಪನಿಗೆ ಒಳಗೆ ಪ್ರವೇಶಿಸಲು ಅವಕಾಶ ಕೊಟ್ಟಿದ್ದಾರೆ. ಒಳಗೆ ಹೋದ ಬಳಕ ನೇರವಾಗಿ ಶಾಸಕರ ಜಾಗದಲ್ಲಿ ಕುಳಿತಿದ್ದಾರೆ. ಈ ವೇಳೆ ಶಾಸಕ ಶರಣ ಗೌಡ ಅನುಮಾನಗೊಂಡು ವಿಚಾರಿಸಿದಾಗಲೂ ನಾನು ಮೊಳಕಾಲ್ಮೂರು ಶಾಸಕ ಎಂದೇ ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಶರಣಗೌಡ ಕಾರ್ಯದರ್ಶಿ ಮೂಲಕ ಸ್ಪೀಕರ್ ಗಮನಕ್ಕೆ ಬಂದಿದ್ದು, ಮಾರ್ಷಲ್‌ಗಳ ಮೂಲಕ ವ್ಯಕ್ತಿಯನ್ನು ಹೊರ ಕಳುಹಿಸಿದ್ದು, ವಿಧಾನಸೌಧ ಪೊಲೀಸರು ಕರಿಯಪ್ಪನನ್ನು ವಶಪಡೆದುಕೊಂಡಿದ್ದಾರೆ.

ಸಿಸಿಬಿ ಜಂಟಿ ಆಯುಕ್ತರಿಂದ ತೀವ್ರ ವಿಚಾರಣೆ
ಸಿದ್ದರಾಮಯ್ಯ ಬಜೆಟ್ ಮಂಡಿಸುವ ವೇಳೆ ಸದನದ ಒಳಗಡೆ ಕೂತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಬಂಧಿತ ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದಾರೆ. 70 ವರ್ಷದ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯನ್ನು ಯಾಮಾರಿಸಿ ಒಳಗೆ ಹೋಗಿದ್ದು, ಇದನ್ನು ಪೊಲೀಸ್ ಆಯುಕ್ತ ಶರಣಪ್ಪ ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ (ಕೇಂದ್ರ ವಿಭಾಗ) ಆರ್ ಶ್ರೀನಿವಾಸ್ ಗೌಡ ಅವರು, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರ ಸೋಗಿನಲ್ಲಿ ಆ ಅಪರಿಚಿಕ ವ್ಯಕ್ತಿ ವಿಧಾನಸಭೆ ಪ್ರವೇಶಿಸಿದ್ದ. ಮಾರ್ಷಲ್ ಗಳು ಆತ ಶಾಸಕನಲ್ಲ ಎಂದು ದೃಢಪಡಿಸಿದ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು, ವಿಧಾನಸೌಧ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಆತ ಯಾವ ಉದ್ದೇಶಕ್ಕೆ ಹೀಗೆ ಮಾಡಿದ ಎಂಬ ಕುರಿತು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಅಂತೆಯೇ ಅನೇಕ ಹೊಸ ಮುಖಗಳಿರುವುದರಿಂದ ವಿಧಾನಸಭೆಯಲ್ಲಿ ನಿಯೋಜನೆಗೊಂಡಿರುವ ಮಾರ್ಷಲ್‌ಗಳಿಗೆ ಶಾಸಕರನ್ನು ಗುರುತಿಸುವುದು ಕಷ್ಟಕರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com