ಗುರು ರಾಘವೇಂದ್ರ ಬ್ಯಾಂಕ್ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಲಾಗುವುದು: ಸಚಿವ ಕೆಎನ್ ರಾಜಣ್ಣ

ತೀವ್ರ ಸಂಚಲನ ಸೃಷ್ಟಿಸಿದ್ದ ನಗರದ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನು ಈ ತಿಂಗಳ ಅಂತ್ಯದೊಳಗೆ ಸಿಬಿಐಗೆ ವಹಿಸಲಾಗುವುದು ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಸೋಮವಾರ ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದರು.
ಕೆಎನ್ ರಾಜಣ್ಣ
ಕೆಎನ್ ರಾಜಣ್ಣ

ಬೆಂಗಳೂರು: ತೀವ್ರ ಸಂಚಲನ ಸೃಷ್ಟಿಸಿದ್ದ ನಗರದ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನು ಈ ತಿಂಗಳ ಅಂತ್ಯದೊಳಗೆ ಸಿಬಿಐಗೆ ವಹಿಸಲಾಗುವುದು ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಸೋಮವಾರ ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದರು.

ಕಾಂಗ್ರೆಸ್ ಎಂಎಲ್‌ಸಿ ಯುಬಿ ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ದಾಖಲೆಗಳನ್ನು ಕನ್ನಡದಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡಲು ಬಹಳ ಸಮಯ ಹಿಡಿಯುತ್ತಿರುವುದರಿಂದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ವಿಳಂಬವಾಗುತ್ತಿದೆ. ಅನುವಾದ ಕಾರ್ಯ ಮುಗಿದ ನಂತರ ಅಧಿಕೃತವಾಗಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುತ್ತೇವೆ ಎಂದು ಸಚಿವರು ಸದನಕ್ಕೆ ವಿವರಿಸಿದರು.

ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಂದ ಪತ್ರ ಬಂದಿದ್ದು, ಆ ಪತ್ರದಲ್ಲಿ ರಾಘವೇಂದ್ರ ಬ್ಯಾಂಕ್‌ನ ಪರವಾನಗಿಯನ್ನು ಏಕೆ ರದ್ದುಗೊಳಿಸಬಾರದು ಎಂಬ ಪ್ರಶ್ನೆಯನ್ನು ಎತ್ತಿದೆ ಎಂದು ಸಚಿವರು ಸದನಕ್ಕೆ ಸ್ಪಷ್ಟಪಡಿಸಿದರು. 

'ನಾವು ಇಲಾಖೆಯ ಅಧಿಕಾರಿಗಳೊಂದಿಗೆ ಅದೇ ವಿಚಾರವಾಗಿ ಚರ್ಚಿಸುತ್ತೇವೆ ಮತ್ತು ಬ್ಯಾಂಕಿನ ಪರವಾನಗಿ ರದ್ದುಗೊಳಿಸದಂತೆ ಆರ್‌ಬಿಐಗೆ ಶೀಘ್ರದಲ್ಲೇ ವಿನಂತಿಸುತ್ತೇವೆ'. ಆದರೆ, ಈ ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ರಾಜಣ್ಣ ಸ್ಪಷ್ಟಪಡಿಸಿದರು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಅಂದಿನ ಸಚಿವ ಎಸ್‌ಟಿ ಸೋಮಶೇಖರ್ ಘೋಷಿಸಿದ್ದರು ಎಂದು ಬಿಜೆಪಿ ಎಂಎಲ್ ಸಿಡಿಎಸ್ ಅರುಣ್ ಸದನದ ಗಮನ ಸೆಳೆಯಲು ಯತ್ನಿಸಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೆಂಕಟೇಶ್, ಕೇವಲ ಆಶ್ವಾಸನೆ ನೀಡಿದ್ದರು. ಆದರೆ, ಆ ಬಗ್ಗೆ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com