ಪ್ಯಾರಿಸ್-ಬೆಂಗಳೂರು ವಿಮಾನದಲ್ಲಿ ತುರ್ತು ಬಾಗಿಲು ತೆರೆಯಲು ಯತ್ನ: ಟೆಕ್ಕಿ ಬಂಧನ

ಪ್ಯಾರಿಸ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಫ್ರಾನ್ಸ್ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಅಮೆರಿಕದ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್‌'ವೊಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ಯಾರಿಸ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಫ್ರಾನ್ಸ್ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಅಮೆರಿಕದ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್‌'ವೊಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಆಂಧ್ರ ಪ್ರದೇಶದ ರಾಜಮಂಡ್ರಿ ನಗರದ ವೆಂಕಟ್ ಮೋಹಿತ್ ಪಥಿಪತಿ (29) ಎಂಬ ಟೆಕ್ಕಿಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಜುಲೈ 15ರ ರಾತ್ರಿ ಈ ಘಟನೆ ನಡೆದಿದೆ. ಜುಲೈ 15ರ ಬೆಳಿಗ್ಗೆ 10.55ರ ಸುಮಾರಿಗೆ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಜುಲೈ 16 ರಂದು ಮಧ್ಯರಾತ್ರಿ 12.30 ಕ್ಕೆ ಕೆಐಎ ತಲುಪಿತ್ತು. ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ಬರಲು ಪಥಿಪತಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ಮಧ್ಯೆಯೇ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಕೆಲಹೊತ್ತು ಆತಂಕಕ್ಕೀಡಾಗಿದ್ದರು.

ಈ ಕುರಿತು ವಿಮಾನದ ಸಿಬ್ಬಂದಿ ಸಲ್ಲಿಸಿದ್ದ ವರದಿ ಆಧಾರದ ಮೇರೆಗೆ ವಿಮಾನ ನಿಲ್ದಾಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಥಿಪತಿ ಅವರು ವಿಮಾನದ ಎಡಭಾಗದಲ್ಲಿರುವ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಯತ್ನಿಸಿದ್ದರು ಎಂದು ಏರ್ ಫ್ರಾನ್ಸ್ ಇಂಡಿಯಾದ ಡ್ಯೂಟಿ ಮ್ಯಾನೇಜರ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಿಮಾನ ಲ್ಯಾಂಡ್ ಆದ ಕೂಡಲೇ ದೂರು ಆಧರಿಸಿ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಲಾಯಿತು ಎಂದು ಪೊಲೀಸ್ ಉಪ ಆಯುಕ್ತ (ಈಶಾನ್ಯ) ಲಕ್ಷ್ಮಿ ಪ್ರಸಾದ್ ಅವರು ಹೇಳಿದ್ದಾರೆ.

ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯ) ಮತ್ತು ವಿಮಾನ ನಿಯಮಗಳು 1937 ರ 29 (ವಿಮಾನ ಅಥವಾ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ವಿಮಾನದಲ್ಲಿ ಅಸಹಜ ನಡವಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧನದ ಬಳಿಕ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com