ನೈತಿಕ ಪೊಲೀಸ್ ​ಗಿರಿ: ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರಿನ ನೋಟಿಸ್

ಮಂಗಳೂರಿನಲ್ಲಿ ನಡೆದ ಎರಡು ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಂಗಳೂರು: ಮಂಗಳೂರಿನಲ್ಲಿ ನಡೆದ ಎರಡು ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ.

ಮಂಗಳೂರು ನಗರ ಪೊಲೀಸರು ಬಾಲು ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಎಂಬ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಿದ್ದಾರೆ.

ನಗರದ ಸುಲ್ತಾನ್ ಜ್ಯುವೆಲರಿ ಹಾಗೂ ಹೋಳಿ ಆಚರಣೆ ವೇಳೆ ನಡೆದ ನೈತಿಕ ಪೊಲೀಸ್​ಗಿರಿಯಲ್ಲಿ ಭಾಗಿಯಾಗಿದ್ದ ಬಜರಂಗದಳದ ಮೂವರನ್ನು ಗಡಿಪಾರು ಮಾಡಲು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಇಲಾಖೆ ನಿರ್ಧರಿಸಿದೆ.

ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು? ಎಂದು ಕಾರಣ ಕೇಳಿ ನೋಟಿಸ್​ ನೀಡಿದೆ. ಮೂವರು ಬಜರಂಗದಳ ಕಾರ್ಯಕರ್ತರಿಗೆ ಕಾ‌ನೂನು ಸುವ್ಯವಸ್ಥೆ ಖಾತ್ರಿ ಪಡಿಸಲು ಡಿಸಿಪಿ ಎದುರು ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚನೆ ನೀಡಲಾಗಿದೆ.

ನೋಟಿಸ್‌ಗೆ ಮೂವರು ಉತ್ತರ ನೀಡಿದ ಬಳಿಕ ಮೂವರನ್ನು ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡೀಪಾರು ಆದೇಶ ಸಾಧ್ಯತೆ ಇದೆ.

ಇತ್ತೀಚೆಗೆ ನಡೆದ ಎರಡು ನೈತಿಕ ಪೊಲೀಸ್ ಗಿರಿ ಕೇಸ್ ನಲ್ಲಿ ಮೂವರು ಭಾಗಿಯಾಗಿದ್ದರು. ಸುಲ್ತಾನ್ ಜ್ಯುವೆಲ್ಲರಿ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ನೈತಿಕ ಪೊಲೀಸ್ ಗಿರಿ ನಡೆಸಿದ್ದಾಗಿ ಆರೋಪಿಸಲಾಗಿತ್ತು. ಸ್ಥಳೀಯ ಠಾಣೆಗಳ ಇನ್ಸ್‌ಪೆಕ್ಟರ್ ಗಳೂ ಗಡೀಪಾರಿಗೆ ವರದಿ ನೀಡಿದ್ದರು. ಹೀಗಾಗಿ ಕಾನೂನು ಪ್ರಕಾರ ಗಡೀಪಾರು ಅಸ್ತ್ರ ಪ್ರಯೋಗ ಮಾಡಲಾಗಿದ್ದು, ಇದೀಗ ನೋಟಿಸ್ ನೀಡಿ ಗಡೀಪಾರು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಸಮಾಜದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಅಪರಾಧಿಕ ಚಟುವಟಿಕೆಗಳ ತಾಣದಿಂದ ಮತ್ತು ಅಪರಾಧ ಹಿನ್ನಲೆಯುಳ್ಳ ಆತನ ಸಹಚರರಿಂದ ದೂರ ಇಟ್ಟು ಅಪರಾಧ ಚಟುವಟಕೆಗಳಗೆ ಕಡಿವಾಣ ಹಾಕಲು ಆರೋಪಿತರನ್ನು ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಗಡಿಪಾರು ಮಾಡುವುದು ಸೂಕ್ತ ಹಾಗೂ ಅನಿವಾರ್ಯ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ವರದಿ ಸಲ್ಲಿಸಿದ್ದಾರೆ.

ಇಂತಹ ಅಪರಾಧ ಹಿನ್ನೆಲೆಯುಳ್ಳ ಎದುರುದಾರನು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಕ್ಷಣದಲ್ಲಾದರೂ ಭಾರತೀಯ ದಂಡ ಸಂಹಿತೆಯ ಅಧ್ಯಾಯ XII, XVI, ಅಥವಾ XVII ರ ಅಡಿಯಲ್ಲಿ ಬರುವ ಅಪರಾಧಗಳನ್ನು ಎಸಗುವುದು, ಅಂಥ ಅಪರಾಧಗಳಿಗೆ ಪರೋಕ್ಷವಾಗಿ ಸಹಾಯ ಮಾಡಿ ದುಷ್ಪ್ರೇರಣಿ ನೀಡುವುದರಿಂದ ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುವ ಸಾಧ್ಯತೆಯು ಇರುತ್ತದೆ. ಇಂತಹ ಅಪರಾಧ ಹಿನ್ನಲೆ ಇರುವವರನ್ನು ಕಾನೂನು ಮೂಲಕ ಸೂಕ್ತ ರೀತಿಯಲ್ಲಿ ಹದ್ದುಬಸ್ತಿನಲ್ಲಿಡದೇ ಹಾಗೇ ಬಿಟ್ಟಲ್ಲಿ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಯಾವುದೇ ಸಾಕ್ಷಿದಾರರು ಮತ್ತು ದೂರುದಾರರಲ್ಲಿ ತನ್ನ ಮೇಲೆ ದಾಖಲಾದ ಕ್ರಿಮಿನಲ್ ಪ್ರಕರಣಗಳಿಂದ ಬಿಡುಗಡೆಯಾಗಲು ಪ್ರಯತ್ನಿಸಿರುವ ಸಾಧ್ಯತೆಯೂ ಇದೆ ಎಂದು ನೊಟೀಸ್‌ ನಲ್ಲಿ ತಿಳಿಸಲಾಗಿದೆ.

ಆರೋಪಗಳಿಗೆ ಹೊರಡಿಸಿರುವ ಕಾರಣ ಕೇಳುವ ನೋಟೀಸ್‌ ಕುರಿತು ಈ ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆಯನ್ನು ನೀಡಬೇಕು ಎಂದು ಮೂವರಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮತ್ತು ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಪೋಲೀಸ್ ಆಯುಕ್ತ ಅಂಶುಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com