ಮೇಕೆದಾಟು ಯೋಜನೆ: ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ಮರಗಳ ಎಣಿಕೆಗೆ ಶೀಘ್ರದಲ್ಲೇ ಸಮೀಕ್ಷೆ ಆರಂಭ

ಕಾವೇರಿಗೆ ಅಡ್ಡಲಾಗಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಉತ್ಸುಕವಾಗಿರುವ ರಾಜ್ಯ ಸರ್ಕಾರ, ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ಮರಗಳ ಎಣಿಕೆಗೆ ಶೀಘ್ರದಲ್ಲೇ ಸಮೀಕ್ಷೆಯನ್ನು ಆರಂಭಿಸಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕಾವೇರಿಗೆ ಅಡ್ಡಲಾಗಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಉತ್ಸುಕವಾಗಿರುವ ರಾಜ್ಯ ಸರ್ಕಾರ, ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ಮರಗಳ ಎಣಿಕೆಗೆ ಶೀಘ್ರದಲ್ಲೇ ಸಮೀಕ್ಷೆಯನ್ನು ಆರಂಭಿಸಲಿದೆ ಎಂದು ತಿಳಿದುಬಂದಿದೆ.

ಯೋಜನೆಯು ಕುಡಿಯುವ ನೀರಿನ ಕೊರತೆಯನ್ನು ನಿವಾರಿಸುವುದು, ಜಲವಿದ್ಯುತ್ ಉತ್ಪಾದಿಸುವುದು ಮತ್ತು ತಮಿಳುನಾಡಿನ ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ ನೀರನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.

ಯೋಜನೆ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿಗಳನ್ನು ನಿಗದಿಪಡಿಸಲು ರಾಜ್ಯ ಸರ್ಕಾರ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ಮರಗಳ ಎಣಿಕೆಗೆ ಸಮೀಕ್ಷೆಯನ್ನು ನಡೆಸಲು ಮುಂದಾಗಿದೆ. ಸಮೀಕ್ಷೆ ನಡೆಸಲು ವನ್ಯಜೀವಿ ಅಭಯಾರಣ್ಯಗಳಿಂದ 29 ಉಪ ವ್ಯಾಪ್ತಿಯ ಅರಣ್ಯ ಅಧಿಕಾರಿಗಳನ್ನು ನಿಯೋಜನೆಗೊಳಿಸಿದೆ.

ಈಗಾಗಲೇ ಯೋಜನೆಗೆ ತಮಿಳುನಾಡು ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕರ್ನಾಟಕದ ನಡೆ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನ್ಯಾಯಾಧಿಕರಣದ ತೀರ್ಪುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದೆ. ಕಾವೇರಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸುವ ಹಕ್ಕು ಕರ್ನಾಟಕಕ್ಕೆ ಇಲ್ಲ ಎಂದೂ ಕೂಡ ಹೇಳಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ರಾಜ್ಯ ಸರ್ಕಾರ ಪರಿಸರ ಹಾನಿ ಕುರಿತು ಸಮೀಕ್ಷೆ ನಡೆಸಲು ಮುಂದಾಗಿದೆ.

ರಾಜ್ಯ ಸರ್ಕಾರ ಯೋಜನೆ ಕುರಿತು ವಿಸ್ತೃತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು, ಪರಿಸರ ಅನುಮತಿಯನ್ನೂ ಕೋರಿದೆ.

ಮೇಕೆದಾಟು ಸಮೀಪದ ಹೆಗನ್ನೂರು ನಿವಾಸಿ ಶಿವಕುಮಾರ್ ಎಂಬವವರು ಯೋಜನೆ ಕುರಿತು ಮಾತನಾಡಿ, ಯೋಜನೆ ಜಾರಿಗೆ ಬಂದಿದ್ದೇ ಆದರೆ, 10 ಎಕರೆ ಭೂಮಿ ಕಳೆದುಕೊಳ್ಳುತ್ತೇನೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯೋಜನೆಗೆ ಮಡಿವಾಳ ಗ್ರಾಮದಲ್ಲಿ ಸುಮಾರು 400 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರಿಂದ ಸಂಗಮ ಮತ್ತು ತಾಂಡ್ಯ ಕಾಲೋನಿ ಮುಳುಗಡೆಯಾಗಲಿದೆ. ಸರಕಾರ ಪರ್ಯಾಯ ಭೂಮಿ ನೀಡುವ ಭರವಸೆ ನೀಡಿದೆ. ಆದರೆ, ಜಮೀನು ಕಳೆದುಕೊಂಡವರು ಹೊಸದಾಗಿ ಕೃಷಿ ಆರಂಭಿಸಬೇಕಾಗಿರುವುದರಿಂದ ಅವರಿಗೆ ನಗದು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೈಸೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಅವರು ಮಾತನಾಡಿ, ಸಮೀಕ್ಷೆಗೆ ನಿಯೋಜಿಸಲಾದ 29 ಅಧಿಕಾರಿಗಳ ಪೈಕಿ 12 ಅಧಿಕಾರಿಗಳು ವರದಿ ನೀಡಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com