ಬೆಂಗಳೂರು: ಫುಡ್ ಡೆಲಿವರಿ ಏಜೆಂಟ್ ಮೇಲೆ ಬೀದಿ ನಾಯಿಗಳ ದಾಳಿ, ಇಬ್ಬರ ವಿರುದ್ಧ ಪ್ರಕರಣ ದಾಖಲು

53 ವರ್ಷದ ಫುಡ್ ಡೆಲಿವರಿ ಏಜೆಂಟ್ ಮೇಲೆ ಮೂರು ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ನಡೆದಿದೆ. ಮಹಿಳೆ ಮತ್ತು ಆಕೆಯ ಮಗ ನಾಯಿಗಳನ್ನು ಏಜೆಂಟ್ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಿದ್ದಾರೆ ಎನ್ನಲಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: 53 ವರ್ಷದ ಫುಡ್ ಡೆಲಿವರಿ ಏಜೆಂಟ್ ಮೇಲೆ ಮೂರು ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ನಡೆದಿದೆ. ಮಹಿಳೆ ಮತ್ತು ಆಕೆಯ ಮಗ ನಾಯಿಗಳನ್ನು ಏಜೆಂಟ್ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಿದ್ದಾರೆ ಎನ್ನಲಾಗಿದೆ.

ಬೊಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನಾಯಿಗಳು ಹಲವು ಬಾರಿ ಕಚ್ಚಿವೆ. ಕೆಎಸ್ ಲೇಔಟ್ 2ನೇ ಹಂತದ ನಿವಾಸಿ ಯು. ಶಿವರಾಜ್ ಎಂಬುವವರು ಲೇಕ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಆಹಾರವನ್ನು ತಲುಪಿಸಿ ಹಿಂತಿರುಗುತ್ತಿದ್ದ ವೇಳೆ ಮೂರು ನಾಯಿಗಳು ಅಟ್ಟಿಸಿಕೊಂಡು ಹೋಗಿವೆ. ನಾಯಿಗಳನ್ನು ಹೆದರಿಸಲು ಅವರು ಕಲ್ಲನ್ನು ಎತ್ತಿಕೊಂಡಿದ್ದಾರೆ.

ಈ ವೇಳೆ ಸಮೀಪದಲ್ಲೇ ಇದ್ದ ಆರೋಪಿಗಳು ತಮ್ಮ ನಾಯಿಗಳಿಗೆ ಕಲ್ಲಿನಿಂದ ಹೊಡೆಯಲು ಯತ್ನಿಸಿದ್ದಕ್ಕೆ ಜಗಳವಾಡಿದ್ದಾರೆ. ತೀವ್ರ ವಾಗ್ವಾದ ನಡೆದಾಗ, ಆರೋಪಿಗಳು ಸಂತ್ರಸ್ತನ ಮೇಲೆ ಕಲ್ಲು ಎಸೆದಿದ್ದಾರೆ. ನಂತರ ಅವರ ಮೇಲೆ ದಾಳಿ ಮಾಡಲು ನಾಯಿಗಳನ್ನು ಬಿಟ್ಟಿದ್ದಾರೆ. 

ಸದ್ಯ ಚಿಕಿತ್ಸೆ ಪಡೆಯುತ್ತಿರುವ ಡೆಲಿವರಿ ಏಜೆಂಟ್ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿಯ ಲೇಕ್ ಸಿಟಿ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಮಧ್ಯರಾತ್ರಿ 2 ರಿಂದ 2.20ರ ನಡುವೆ ಘಟನೆ ಸಂಭವಿಸಿದೆ.

'ಘಟನೆಯಲ್ಲಿ ನಾನು ಹೇಗೆ ಬದುಕಿ ಬಂದೆ ಎಂಬುದು ನನಗೆ ತಿಳಿದಿಲ್ಲ. ನಾನು ಹೆಲ್ಮೆಟ್ ಅನ್ನು ಹೊಂದಿದ್ದೆ ಮತ್ತು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಅದನ್ನು ಗುರಾಣಿಯಾಗಿ ಬಳಸುತ್ತಿದ್ದೆ. ನಾನು ಓಡುತ್ತಿದ್ದೆ ಮತ್ತು ನಾನು ಧರಿಸಿದ್ದ ಕನ್ನಡಕ ಕೆಳಗೆ ಬಿದ್ದಿತು ಮತ್ತು ನನಗೆ ಸರಿಯಾಗಿ ಕಾಣಿಸಲಿಲ್ಲ. ಈ ವೇಳೆ ಮುಂದೆ ಓಡಲಾಗದೆ ರಸ್ತೆಯ ಜೆಲ್ಲಿ ಕಲ್ಲಿನ ಮೇಲೆ ಉರುಳಿದೆ' ಎಂದು ಶಿವರಾಜ್ ಹೇಳಿದರು.

ನಾನು ಸಹಾಯಕ್ಕಾಗಿ ಕಿರುಚುತ್ತಿದ್ದಂತೆ, ಜನರು ತಮ್ಮ ಮನೆಯಿಂದ ಹೊರಗೆ ಬಂದರು. ಆದರೆ, ಯಾರೂ ನನಗೆ ಸಹಾಯ ಮಾಡಲಿಲ್ಲ. ನಾನು ಇನ್ನೂ ನೋವಿನಲ್ಲಿದ್ದೇನೆ ಮತ್ತು ನಾಯಿ ಕಡಿತಕ್ಕೆ ರೇಬೀಸ್ ಚುಚ್ಚುಮದ್ದನ್ನು ಪಡೆಯುತ್ತಿದ್ದೇನೆ. ನನ್ನ ಮೇಲೆ ದಾಳಿ ಮಾಡುವಂತೆ ನಾಯಿಗಳಿಗೆ ಆಜ್ಞಾಪಿಸಿದ ನಂತರ ಮಹಿಳೆ ಮತ್ತು ಆಕೆಯ ಮಗ ಒಳಗೆ ಹೋದರು. ಬಳಿಕ ಆಸ್ಪತ್ರೆಗೆ ತೆರಳಲು ಮುಂಗಾದಿದ್ದ ಶಿವರಾಜ್, ಪೊಲೀಸ್ ಗಸ್ತು ತಿರುಗುತ್ತಿದ್ದ ವಾಹನವನ್ನು ನೋಡಿ ಅವರ ಸಹಾಯ ಕೇಳಿದ್ದಾರೆ.

'55 ವರ್ಷದ ಮಹಿಳೆ ಮತ್ತು ಆಕೆಯ 35 ವರ್ಷದ ಮಗನ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಇಬ್ಬರನ್ನೂ ವಿಚಾರಣೆ ನಡೆಸಲಾಗಿದ್ದು, ನಾಯಿಗಳನ್ನು ಛೂ ಬಿಟ್ಟಿದ್ದನ್ನು ನಿರಾಕರಿಸಿದ್ದಾರೆ. ನಾಯಿಗಳ ಮೇಲೆ ದಾಳಿ ಮಾಡಲು ಕಲ್ಲು ತೆಗೆದುಕೊಂಡರು ಎಂದು ಸಂತ್ರಸ್ತನನ್ನು ದೂಷಿಸುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಜೊತೆಗೆ ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆಗಾಗಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com