ಪಶ್ಚಿಮಘಟ್ಟ ಸಂರಕ್ಷಣೆಯಲ್ಲಿ ಅಂತರ್ ರಾಜ್ಯಗಳ ಸಮನ್ವಯ ಅಗತ್ಯ: ಸಚಿವ ಈಶ್ವರ್ ಖಂಡ್ರೆ

ಪಶ್ಚಿಮ ಘಟ್ಟಗಳು ಇತರ ಹಲವು ರಾಜ್ಯಗಳಿಗೆ ವಿಸ್ತರಿಸಿದ್ದು, ಪಶ್ಚಿಮಘಟ್ಟಗಳ ಸಂರಕ್ಷಣೆಯಲ್ಲಿ ಅಂತರರಾಜ್ಯ ಸಮನ್ವಯ ಮತ್ತು ಸಂಘಟಿತ ಪ್ರಯತ್ನಗಳ ಅಗತ್ಯವಿದೆ ಎಂದು ಸಚಿವ ಈಶ್ವರ್ ಖಂಡ್ರೆಯವರು ಶನಿವಾರ ಹೇಳಿದರು.
ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ
Updated on

ಬೆಂಗಳೂರು: ಪಶ್ಚಿಮ ಘಟ್ಟಗಳು ಇತರ ಹಲವು ರಾಜ್ಯಗಳಿಗೆ ವಿಸ್ತರಿಸಿದ್ದು, ಪಶ್ಚಿಮಘಟ್ಟಗಳ ಸಂರಕ್ಷಣೆಯಲ್ಲಿ ಅಂತರರಾಜ್ಯ ಸಮನ್ವಯ ಮತ್ತು ಸಂಘಟಿತ ಪ್ರಯತ್ನಗಳ ಅಗತ್ಯವಿದೆ ಎಂದು ಸಚಿವ ಈಶ್ವರ್ ಖಂಡ್ರೆಯವರು ಶನಿವಾರ ಹೇಳಿದರು.

ಬೆಂಗಳೂರಿನಲ್ಲಿ ಆಟ್ರಿಯಾ ವಿಶ್ವವಿದ್ಯಾಲಯ, ಸ್ವಿಸ್ನೆಕ್ಸ್ ಮತ್ತು ಎಫ್‌ಕೆಸಿಸಿಐ ಆಯೋಜಿಸಿದ್ದ ಅಂತರಪ್ರಬೇಧಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳು ಮತ್ತು ಅದರ ಜೀವವೈವಿಧ್ಯಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸಂಜಯ್ ಕುಮಾರ್ ನೇತೃತ್ವದ ಎರಡನೇ ಸಮಿತಿ ಡಿಸೆಂಬರ್ ವೇಳೆಗೆ ವರದಿಯನ್ನು ಜಾರಿಗೊಳಿಸುವ ನಿರೀಕ್ಷೆಯಿದ್ದು ಅದರ ಆಧಾರದ ಮೇಲೆ ಸರ್ಕಾರ ಮತ್ತಷ್ಟು ಪ್ರಜ್ಞಾಪೂರ್ವಕವಾಗಿ ವರದಿ ಜಾರಿಗೆ ಕೆಲಸ ಮಾಡಲಿದೆ ಎಂದು ಹೇಳಿದರು.

ಪಶ್ಚಿಮ ಘಟ್ಟಗಳ ಬಹುತೇಕ ಭಾಗವನ್ನು ಕರ್ನಾಟಕ ರಾಜ್ಯ ಹಂಚಿಕೊಂಡಿದ್ದು, ಅದರ ಭೌಗೋಳಿಕ ಪ್ರದೇಶಗಳಲ್ಲಿ 11 ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿನ ಮತ್ತು ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳ ಸಂರಕ್ಷಣೆ, ತಂತ್ರಜ್ಞಾನ ಮತ್ತು ಶಿಕ್ಷಣದ ಬಗ್ಗೆ ಸುದೀರ್ಘವಾದ ಅರಿವು ಮೂಡಿಸಲು ಪ್ರಾಥಮಿಕ ಶಾಲೆ ಹಂತದಿಂದ ಪದವಿ ಹಂತದವರೆಗೆ ಪಠ್ಯಕ್ರಮವನ್ನು ತಕ್ಷಣ ಪರಿಚಯಿಸುವ ಅಗತ್ಯವಿದೆ. ಸಂರಕ್ಷಣೆ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನವನ್ನು ಬಳಸುವ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಏಟ್ರಿಯಾ ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಕಸ್ತೂರಿರಂಗನ್ ಸಮಿತಿ ವರದಿ ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಅದಕ್ಕೂ ಮುನ್ನ ಗಾಡ್ಗೀಳ್ ಸಮಿತಿ ವರದಿಗೂ ಇದೇ ದುಃಸ್ಥಿತಿ ಎದುರಾಗಿತ್ತು. ಕರ್ನಾಟಕವು ಇತರ 6 ನೆರೆಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸಲಿದೆ ಎಂದು ಸಚಿವರು ಭರವಸೆ ನೀಡಿದರು.

ವರದಿ ಜಾರಿಗೆ ಕಾನೂನು ರೂಪಿಸುವುದರ ಜೊತೆಗೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮ ಪಂಚಾಯಿತಿಗಳಲ್ಲಿ ಅರಣ್ಯ ಸಮಿತಿಗಳು, ಅಂಗನವಾಡಿಗಳು ಮತ್ತು ಶಾಲಾ ಮಕ್ಕಳನ್ನು ಈ ಬಗ್ಗೆ ಜಾಗೃತಿ ಅಭಿಯಾನಕ್ಕೆ ತೊಡಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com