ಕಂಪನಿ ನೋಂದಣಿ ಸಮಸ್ಯೆಗೆ ಸಚಿವ ಎಂಬಿ ಪಾಟೀಲ್ ಸ್ಪಂದನೆ: 'ನಮ್ಮ ಆತ್ಮವಿಶ್ವಾಸ ಹೆಚ್ಚಿದೆ.. ಥ್ಯಾಂಕ್ಯೂ ಸರ್'.. ಟೆಕ್ಕಿ ಪ್ರತಿಕ್ರಿಯೆ!

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಂಪನಿ ಸ್ಥಾಪಿಸಬೇಕು ಎಂಬ ಆಸೆಯಿಂದ ಇಲ್ಲಿಗೆ ಬಂದು ಕಂಪನಿ ನೋಂದಣಿಗೆ 2 ತಿಂಗಳ ಕಾಲ ಕಷ್ಟಪಟ್ಟರೂ ಸಾಧ್ಯವಾಗದೇ ಟೆಕ್ಕಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡ ಬೆನ್ನಲ್ಲೇ ರಾಜ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಸಚಿವ ಎಂಬಿ ಪಾಟೀಲ್ ಮತ್ತು ಟೆಕ್ಕಿ ಬ್ರಿಜ್ ಸಿಂಗ್
ಸಚಿವ ಎಂಬಿ ಪಾಟೀಲ್ ಮತ್ತು ಟೆಕ್ಕಿ ಬ್ರಿಜ್ ಸಿಂಗ್

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಂಪನಿ ಸ್ಥಾಪಿಸಬೇಕು ಎಂಬ ಆಸೆಯಿಂದ ಇಲ್ಲಿಗೆ ಬಂದು ಕಂಪನಿ ನೋಂದಣಿಗೆ 2 ತಿಂಗಳ ಕಾಲ ಕಷ್ಟಪಟ್ಟರೂ ಸಾಧ್ಯವಾಗದೇ ಟೆಕ್ಕಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡ ಬೆನ್ನಲ್ಲೇ ರಾಜ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಹೌದು.. ಬೆಂಗಳೂರಿನಲ್ಲಿ ಕಂಪನಿ ನೋಂದಾಯಿಸಲು ಆಗದ್ದಕ್ಕೆ ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದ ಭಾರತೀಯ ಮೂಲದ ಅಮೆರಿಕ ಟೆಕಿಯೊಬ್ಬರಿಗೆ ನೆರವು ನೀಡುವುದಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಎಂಬಿ ಪಾಟೀಲ್, ‘ನಿಮ್ಮ ಸಮಸ್ಯೆಯ ಬಗ್ಗೆ ಕೇಳಲು ಕ್ಷಮೆಯಾಚಿಸುತ್ತೇನೆ. ಕಂಪನಿಗಳ ಸ್ಥಾಪನೆಗೆ ಸಂಬಂಧಿಸಿದ ಕೆಲಸಗಳನ್ನು ಸಾಮಾನ್ಯವಾಗಿ ಸಿಎಸ್‌ಗಳು ನೋಡಿಕೊಳ್ಳುತ್ತಾರೆ. ಸಂಬಂಧಪಟ್ಟ ಕಂಪನಿಗಳ ರಿಜಿಸ್ಟ್ರಾರ್‌ (RoC) ಕಡತಗಳನ್ನು ತೆರವುಗೊಳಿಸಲು 15-20 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. (ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಮತ್ತು ಎಲ್ಲಾ ರಾಜ್ಯಗಳಿಗೂ ಒಂದೇ ಆಗಿರುತ್ತದೆ). ಆದಾಗ್ಯೂ, ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ನಾವು ಅದನ್ನು ಪರಿಹರಿಸುತ್ತೇವೆ’ ಎಂದು ಟ್ವೀಟ್ ಮಾಡಿದ್ದರು.

ಸಚಿವರ ಪ್ರತಿಕ್ರಿಯೆ ಕುರಿತು ಪ್ರತಿಕ್ರಿಯೆ ನೀಡಿರುವ ಟೆಕ್ಕಿ ಬ್ರಿಜ್ ಸಿಂಗ್, “ನಿಜವಾಗಿಯೂ ನಿಮ್ಮ ಸ್ಪಂದನೆಯನ್ನು ಪ್ರಶಂಸಿಸುತ್ತೇವೆ ಸರ್, ನಿಮ್ಮ ನಡೆ ನಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ವಿಷಯಗಳು ಚಲಿಸಲು ಪ್ರಾರಂಭಿಸಿವೆ ಮತ್ತು ಅಗತ್ಯವಿದ್ದಲ್ಲಿ ನಾನು ನಿಮ್ಮ ತಂಡವನ್ನು ಸಂಪರ್ಕಿಸುತ್ತೇನೆ. ನಿಮ್ಮ ಬೆಂಬಲಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಏನಿದು ಪ್ರಕರಣ?
ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಟೆಕ್ಕಿ ಬ್ರಿಜ್ ಸಿಂಗ್ ಎನ್ನುವರು ಬೆಂಗಳೂರಿನಲ್ಲಿ ಕಂಪನಿ ತೆರೆಯಲು ಉತ್ಸುಕರಾಗಿದ್ದರು. ಇದಕ್ಕಾಗಿ ಕಳೆದ 2 ತಿಂಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಜ್ ಸಿಂಗ್ ತಮ್ಮ ನೂತನ ಕಂಪನಿ ನೋಂದಣಿೃಗೆ ಸಾಕಷ್ಟು ಅಲೆದಾಡಿದ್ದಾರೆ. ಅಧಿಕಾರಿಗಳಿಂದ ಅಧಿಕಾರಿಗಳ ವರಗೆ ಕಚೇರಿಯಿಂದ ಕಚೇರಿಗೆ ಅಲೆದೂ ಅಲೆದೂ ಹೈರಾಣಾಗಿದ್ದು, ಕೊನೆಗೂ ಅದು ಸಾಧ್ಯವಾಗದೇ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ.

ಟ್ವಿಟರ್ ಮೂಲಕ ನೋವು ಹೊರಹಾಕಿದ್ದ ಟೆಕ್ಕಿ ಬ್ರಿಜ್ ಸಿಂಗ್
ಈ ಕುರಿತು ಜುಲೈ 27 ರಂದು ಟ್ವೀಟ್ ಮಾಡಿದ್ದ ಟೆಕ್ಕಿ ಬ್ರಿಜ್ ಸಿಂಗ್ ಎನ್ನುವರು, ‘ಎರಡು ತಿಂಗಳು ಕಳೆದರೂ ಬೆಂಗಳೂರಲ್ಲಿ ನನ್ನ ಹೊಸ ಕಂಪನಿ ನೋಂದಣಿ ಮಾಡೋಕೆ ಆಗಲಿಲ್ಲ. ಭಾರವಾದ ಹೃದಯದಿಂದ ಅಮೆರಿಕಕ್ಕೆ ವಾಪಸ್ ಹೋಗುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದರು. ‘ಬೆಂಗಳೂರು, ಭಾರತವನ್ನು ಪ್ರೀತಿಸುತ್ತೇನೆ. ಆದರೆ, ತವರಿಗೆ ಬಂದ ನಂತರ ಸಾಕಷ್ಟು ಅನುಭವ ಆಗಿದೆ. ಭಾರತದಲ್ಲಿ ಕಂಪನಿ ನೋಂದಾಯಿಸಲು (ಬೆಂಗಳೂರು) ಎರಡು ತಿಂಗಳು ಗತಿಸಿದರೂ ಆಗಿಲ್ಲ. ಇದರಿಂದ ಕಂಪನಿ ಹೂಡಿಕೆದಾರರು, ಸಹ ಸಂಸ್ಥಾಪಕರು ಹಾಗೂ ಗ್ರಾಹಕರ ಪ್ರತಿಕ್ರಿಯೆ ವಿಭಿನ್ನ ಮಟ್ಟದಲ್ಲಿ ಕಂಡು ಬಂದಿದೆ. ನಾನು ಅಮೆರಿಕಕ್ಕೆ ಹಿಂತಿರುಗುವ ಸಮಯ ಬಂದಿದೆ. ಇದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ’ ಎಂದು ಅಳಲು ತೋಡಿಕೊಂಡಿದ್ದರು.

ಇದೀಗ ಟೆಕ್ಕಿ ಬ್ರಿಜ್ ಸಿಂಗ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಚಿವ ಎಂಬಿ ಪಾಟೀಲ್ ಕ್ರಮದ ಭರವಸೆ ನೀಡಿದ್ದಾರೆ. ಇದೀಗ ಸಚಿವರ ಕ್ರಮಕ್ಕೆ ಬ್ರಿಜ್ ಸಿಂಗ್ ಕೂಡ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com