ಕರಾವಳಿ ಜಿಲ್ಲೆಗಳಲ್ಲಿ ಜೂನ್ 1 ರಿಂದ ಜುಲೈ 31ರ ವರೆಗೆ ಮೀನುಗಾರಿಕೆ ನಿಷೇಧ: ಮೀನಿನ ದರ ಗಗನಕ್ಕೇರುವ ಸಾಧ್ಯತೆ

ಎಂದಿನಂತೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕಾ ಋತು ಮುಕ್ತಾಯವಾಗಿದೆ. ಜಿಲ್ಲೆಗಳಲ್ಲಿ ಜೂ.1ರಿಂದ ಜು.31ರ ವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಮೀನಿನ ದರ ಗಗನಕ್ಕೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮೀನು ಮಾರುಕಟ್ಟೆ ಬಂದ್ ಆಗಿರುವ ಪರಿಣಾಮ ತಳ್ಳುಗಾಡಿಯಲ್ಲಿ ಮೀನು ಖರೀದಿಸುತ್ತಿರುವ ಗ್ರಾಹಕರು.
ಮೀನು ಮಾರುಕಟ್ಟೆ ಬಂದ್ ಆಗಿರುವ ಪರಿಣಾಮ ತಳ್ಳುಗಾಡಿಯಲ್ಲಿ ಮೀನು ಖರೀದಿಸುತ್ತಿರುವ ಗ್ರಾಹಕರು.

ಮಂಗಳೂರು: ಎಂದಿನಂತೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕಾ ಋತು ಮುಕ್ತಾಯವಾಗಿದೆ. ಜಿಲ್ಲೆಗಳಲ್ಲಿ ಜೂ.1ರಿಂದ ಜು.31ರ ವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಮೀನಿನ ದರ ಗಗನಕ್ಕೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ. ಮೀನುಗಾರಿಕಾ ಋತುವಿನಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಯುವ ಈ ಉದ್ಯಮದಲ್ಲಿ ವರ್ಷದಲ್ಲಿ ಎರಡು ತಿಂಗಳ ರಜಾ ಅವಧಿ ಇರುತ್ತದೆ. ಪ್ರತಿ ವರ್ಷ ಆಗಸ್ಟ್ ತಿಂಗಳಿಂದ ಮೇ ತಿಂಗಳವರೆಗೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಮಾಡಲು ಅವಕಾಶ ಇರುತ್ತದೆ.

ಈ ಸಂದರ್ಭದಲ್ಲಿ ಪಶ್ಚಿಮ ಕರಾವಳಿಯಿಂದ ಸಾವಿರಾರು ಮೀನುಗಾರಿಕಾ ಬೋಟ್​ಗಳು ಆಳ ಸಮುದ್ರ ಮೀನುಗಾರಿಕೆ ನಡೆಸುತ್ತವೆ. ಆಳ ಮೀನುಗಾರಿಕಾ ಉದ್ಯಮಕ್ಕೆ ಜೂನ್ ಮತ್ತು ಜುಲೈ ತಿಂಗಳು ರಜಾ ಅವಧಿಯಾಗಿದೆ. ಈ ಅವಧಿಯಲ್ಲಿ ಮೀನುಗಾರಿಕೆ ನಡೆಸದಂತೆ ಸರ್ಕಾರ ನಿಷೇಧ ವಿಧಿಸುತ್ತದೆ.

ಜೂನ್ 1 ರಿಂದ 61 ದಿನಗಳ ಕಾಲ ನಿಷೇಧ ಹೇರಲಾಗುತ್ತದೆ. ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವ ಡೀಪ್ ಸೀ ಬೋಟ್ ಮತ್ತು ಪರ್ಸಿನ್ ಬೋಟ್​ಗಳು ಮೀನುಗಾರಿಕೆಗೆ ತೆರಳುವಂತಿಲ್ಲ. ಬೋಟ್​ಗಳನ್ನು ಆಯಾ ಬಂದರುಗಳಲ್ಲಿ ಮತ್ಸೋದ್ಯಮಿಗಳು ಲಂಗರು ಹಾಕುತ್ತಾರೆ.

ಮಳೆಗಾಲದ ಆರಂಭದ ಎರಡು ತಿಂಗಳ‌ ಅವಧಿಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯವಾಗಿರುತ್ತದೆ. ಮೀನುಗಳು‌ ಈ ಅವಧಿಯಲ್ಲಿ ಮೊಟ್ಟೆಯನ್ನಿಡುವುದರಿಂದ ಅವುಗಳ ಸಂತತಿ ಹೆಚ್ಚಲಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಳ ಸಂತತಿ ಕಡಿಮೆ ಆಗಿ ಮತ್ಸ್ಯ ಕ್ಷಾಮ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಮಳೆಗಾಲದ ಆರಂಭದ ಈ ಅವಧಿಯಲ್ಲಿ ಅರಬ್ಬಿ ಸಮುದ್ರ ರೌದ್ರಾವತಾರ ತಾಳಿರುತ್ತದೆ. ಭಾರಿ ಗಾತ್ರದ ಅಲೆಗಳು ಮತ್ತು ಸಮುದ್ರದ ರೌದ್ರಾವತಾರ ಮೀನುಗಾರರಿಗೆ ಮತ್ತು ಮೀನುಗಾರಿಕೆ ಬೋಟ್​ಗಳಿಗೆ ಅಪಾಯ ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ಮೀನುಗಾರರು ಈ ಅವಧಿಯಲ್ಲಿ ಮೀನುಗಾರಿಕೆಗೆ ತೆರಳದೆ ರಜೆಯಲ್ಲಿರುತ್ತಾರೆ.

ಮೀನುಗಾರಿಕಾ ನಿಷೇಧದ ಹಿನ್ನೆಲೆಯಲ್ಲಿ ಬಹುತೇಕ ಯಾಂತ್ರಿಕ ಬೋಟುಗಳು ಮಂಗಳೂರು ದಕ್ಕೆಯಲ್ಲಿ ಲಂಗರು ಹಾಕಿವೆ. ಇದರಿಂದಾಗಿ ಎರಡು ತಿಂಗಳ ಕಾಲ ಮೀನು ಪ್ರಿಯರಿಗೆ ಸಮಸ್ಯೆಗಳು ಎದುರಾಗಲಿವೆ.

ಮೀನುಗಾರಿಕೆಗೆ ನಿಷೇಧ ಇರುವುದರಿಂದ ಮೀನು ಮಾರಾಟ ಶೇ.20-30ರಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಅಲ್ಲದೆ, ಮತ್ತೊಂದೆಡೆ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆ ಇರುವುದರಿಂದ ಮೀನಿನ ದರ ಕೂಡ ಗಗನಕ್ಕೇರುವ ಸಾಧ್ಯತೆಗಳಿವೆ.

ಬೆಂಗಳೂರು ಪೂರ್ವ ಮತ್ತು ಪಶ್ಚಿಮ ಕರಾವಳಿಯಿಂದ ಸಮಾನ ದೂರದಲ್ಲಿದೆ, ಅಲ್ಲಿ ಮೀನುಗಳನ್ನು ಸಂಗ್ರಹಿಸಲಾಗುತ್ತದೆ. ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ನಗರದ ರಸೆಲ್ ಮಾರುಕಟ್ಟೆಯಲ್ಲಿ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ತಮಿಳುನಾಡು ಕರಾವಳಿಯಲ್ಲಿಯೂ ಮೀನುಗಾರಿಕೆ ನಿಷೇಧ ಜಾರಿಯಲ್ಲಿದ್ದು, ಅಲ್ಲಿ ಏಪ್ರಿಲ್ 15 ರಂದು ಮೀನುಗಾರಿಕೆಗೆ ನಿಷೇಧ ಹೇರಲಾಗಿದ್ದು, ಈ ನಿಷೇಧ ಜೂನ್ 14ಕ್ಕೆ ಕೊನೆಗೊಳ್ಳಲಿದೆ ಎಂದು ತಿಳಿದುಬಂದಿದೆ.

ಬಿಎಸ್ ಬಾಷಾ ಫಿಶ್ ಮರ್ಚೆಂಟ್‌ನಲ್ಲಿ ಕೆಲಸ ಮಾಡುತ್ತಿರುವ ಅಲ್ತಾಫ್ ಖಾನ್ ಎಂಬುವವರು ಮಾತನಾಡಿ, ಮಂಗಳೂರು, ಒಡಿಶಾ, ಮಹಾರಾಷ್ಟ್ರ, ಗೋವಾ ಮತ್ತು ಇತರ ಕರಾವಳಿ ಪ್ರದೇಶಗಳಿಂದ ನಿಯಮಿತವಾಗಿ 500 ರಿಂದ 600 ಕೆಜಿ ಮೀನುಗಳನ್ನು ಖರೀದಿ ಮಾಡಲಾಗುತ್ತದೆ. ನಿಷೇಧದ ಸಮಯದಲ್ಲಿ ಕೇವಲ 200 ರಿಂದ 250 ಕೆಜಿ ಮೀನುಗಳಷ್ಟೇ ಪಡೆಯಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಬೆಲೆಗಳೂ ಕೂಡ ಹೆಚ್ಚಾಗಿರುತ್ತದೆ. ಬೆಲೆ ಏರಿಕೆಯಿಂದಾಗಿ ಗ್ರಾಹಕರು ಮೀನು ಖರೀದಿಯನ್ನು ನಿಯಂತ್ರಿಸುತ್ತಾರೆ. ಇದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತದೆ. ಮೀನುಗಳ ಪ್ರಮಾಣ ಕಡಿಮೆಯಾಗುವುದರಿಂದ ಮುಂಚಿತವಾಗಿಯೇ ಕೋಲ್ಡ್ ಸ್ಟೋರೇಜ್ ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮತ್ತೋರ್ವ ಮಾರಾಟಗಾರ ಸೈಯದ್ ನವಾಜ್ ಎಂಬುವವರು ಮಾತನಾಡಿ, ಬಂಗಡ ಮೀನು ಅಥವಾ ಭಾರತೀಯ ಮ್ಯಾಕೆರೆಲ್'ಗಳ ಬೆಲೆ ಪ್ರಸ್ತುತ 180-200ರೂಗಳಷ್ಟಿದೆ. ಮುಂಬರುವ ದಿನಗಳಲ್ಲಿ ಇದರ ಬೆಲೆ 250-300ರಷ್ಟಕ್ಕೆ ಏರಿಕೆಯಾಗಬಹುದು. ಅದೇ ರೀತಿ, ಟ್ಯೂನ ಮೀನುಗಳ ಬೆಲೆ 220 ರಿಂದ 280-300 ರೂ.ಗೆ ಏರುವ ಸಾಧ್ಯತೆಗಳಿವೆ. ನಾವು ಪ್ರತಿದಿನ 40 ರಿಂದ 50 ಕೆಜಿ ಮೀನುಗಳನ್ನು ಖರೀದಿ ಮಾಡುತ್ತೇವೆ. ಬೆಲೆ ಏರಿಕೆಯಿಂದಾಗಿ ಮಾರಾಟವು 30 ರಿಂದ 40 ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೀನುಗಾರಿಕೆ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಮಾತನಾಡಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಎಫ್‌ಡಿಸಿ) ಮೀನುಗಾರಿಕೆ ನಿಷೇಧವನ್ನು ಮೂರು ತಿಂಗಳಿಂದ 2 ತಿಂಗಳಿಗೆ ಇಳಿಕೆ ಮಾಡಿದೆ. ಆಗಸ್ಟ್ ತಿಂಗಳಿನಲ್ಲಿ ಸಮುದ್ರ ಅಷ್ಟು ಪ್ರಕ್ಷುಬ್ಧವಾಗಿರದ ಕಾರಣ ನಿಷೇಧ ದಿನಗಳನ್ನು ಇಳಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೀನುಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ದಿನೇಶ್ ಕುಮಾರ್ ಮಾತನಾಡಿ, ನಿಷೇಧದಿಂದಾಗಿ ಮೀನುಗಳ ಬೆಲೆಯೆಲ್ಲಿ ಏರಿಕೆಗಳು ಕಂಡು ಬರಲಿದೆ. ಆದರೆ, ಪ್ರಸ್ತುತ ನಗರದಲ್ಲಿ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಖಾಸಗಿ ಕೋಲ್ಡ್ ಸ್ಟೋರೇಜ್ ಸೌಲಭ್ಯವಿದೆ ಎಂದು ಹೇಳಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು ನಡೆಸಿದ ಅಧ್ಯಯನದ ವರದಿಯೊಂದು ಬೆಂಗಳೂರು ನಗರ ಪ್ರತೀನಿತ್ಯ ಸುಮಾರು 40-50 ಟನ್ ಮೀನುಗಳನ್ನು ಖರೀಸುತ್ತಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com