ಬಿಬಿಎಂಪಿ ಆಡಳಿತ ವ್ಯವಸ್ಥೆ ಪುನರ್ ರಚನೆಗೆ ಸರ್ಕಾರ ಮುಂದು?

ಉತ್ತಮ ಆಡಳಿತಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪುನರ್ ರಚನೆ ಮಾಡಲು ರಾಜ್ಯ ಸರ್ಕಾರ ಮುಂದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಉತ್ತಮ ಆಡಳಿತಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪುನರ್ ರಚನೆ ಮಾಡಲು ರಾಜ್ಯ ಸರ್ಕಾರ ಮುಂದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ.

ಎಲ್ಲವೂ ಅಂದುಕೊಂಡಂತೇ ಆದರೆ, ನಗರದಲ್ಲಿ ಒಂದಕ್ಕಿಂತ ಹೆಚ್ಚು ಪಾಲಿಕೆಗಳು, ಮೇಲ್ವಿಚಾರಣಾ ಪ್ರಾಧಿಕಾರಿಗಳಿರಲಿವೆ. ಪುನರ್ ರಚನೆ ವೇಳೆ ನಗರವನ್ನು ವಿಭಜನೆ ಮಾಡಲಾಗುವುದಿಲ್ಲ, ಪಾಲಿಕೆಯನ್ನು ಮಾತ್ರ ವಿಭಜಿಸಲು ಚಿಂತನೆಗಳು ನಡೆದಿವೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಬಿಬಿಎಂಪಿ ಪುನರ್ರಚನಾ ಸಮಿತಿಯ ಮುಖ್ಯಸ್ಥರಾಗಿದ್ದ ಮಾಜಿ ಮುಖ್ಯ ಕಾರ್ಯದರ್ಶಿ ಬಿಎಸ್ ಪಾಟೀಲ್, ಸಿದ್ದಯ್ಯ ಮತ್ತು ರವಿಚಂದರ್ ಸೇರಿದಂತೆ ಸಮಿತಿಯ ಇತರೆ ಸದಸ್ಯರು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಈ ಸಂದರ್ಬದಲ್ಲಿ ಬಿಬಿಎಂಪಿ ಪುನರ್‌ರಚನೆ ಕುರಿತ ತಮ್ಮ ವರದಿಯ ಬಗ್ಗೆ ಸದಸ್ಯರು, ಉಪ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತದ ಮಾದರಿಯು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಬ್ರ್ಯಾಂಡ್ ಬೆಂಗಳೂರು ನಿರ್ಮಿಸಲು ಸಹಾಯ ಮಾಡುವ ನಾಗರಿಕ-ಕೇಂದ್ರಿತವಾಗಿಸುವ ಮಾದರಿಯ ಅವಶ್ಯಕತೆಯ ಬಗ್ಗೆ ಡಿಕೆ.ಶಿವಕುಮಾರ್ ಅವರು ಚಿಂತನೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಪ್ರಸ್ತುತ ಕೇಂದ್ರ ಕಚೇರಿ ಎನ್ಆರ್ ಸ್ಕ್ವೇರ್ ನಲ್ಲಿದ್ದು, ಹೊರವಲಯದಲ್ಲಿರುವ ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಸೇರಿದಂತೆ ಇತರೆ ವಲಯದ ಅಧಿಕಾರಿಗಳು ಸಭೆಗೆಂದು ಕೇಂದ್ರ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಯಾವುದೇ ಸ್ಪಷ್ಟೀಕರಣಕ್ಕಾಗಿಯಾದರೂ ಸಾರ್ವಜನಿಕರು ದೂರದ ಪ್ರಯಾಣ ಮಾಡಬೇಕಾಗಿದೆ. ಹೀಗಾಗಿ ಸಮಿತಿಯು ಕಡಿಮೆ ಮತ್ತು ಸಮಾನ ಜನಸಂಖ್ಯೆ ಹೊಂದಿರುವ 400 ವಾರ್ಡ್‌ಗಳನ್ನು ಶಿಫಾರಸು ಮಾಡಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಸಾರಿಗೆ ಸಮಿತಿ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿಯನ್ನು ಬೃಹತ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ತರುವಂತೆ ಕೂಡ ಪ್ರಸ್ತಾಪಿಸಿತ್ತು.

ಆದರೆ, ಈ ಪ್ರಸ್ತಾಪವನೆಗೆ ಅಂದಿನ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಇದರ ಬದಲಿಗೆ 198 ವಾರ್ಡ್ ಗಳನ್ನು 243 ವಾರ್ಡ್ ಗಳಾಗಿ ವಿಂಗಡಣೆ ಮಾಡಿತು. 2020 ರಲ್ಲಿ ಬಿಬಿಎಂಪಿಗೆ ಪ್ರತ್ಯೇಕ ಕಾಯಿದೆಯನ್ನೂ ಕೂಡ ಅಂಗೀಕರಿಸಿತು.

ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಮಿತಿಯ ಶಿಫಾರಸುಗಳನ್ನು ಸರ್ಕಾರ ಪರಿಗಣಿಸಿದ್ದೇ ಆದರೆ, ಬಿಬಿಎಂಪಿ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com