ಲಿಂಗನಮಕ್ಕಿ ಜಲಾಶಯದಲ್ಲಿ ತಳ ಸೇರುತ್ತಿರುವ ನೀರು: 20 ದಿನಗಳ ಕಾಲ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯ!

ಲಿಂಗನಮಕ್ಕಿ ಜಲಾಶಯದಲ್ಲಿನ ನೀರು ತಳ ಸೇರುತ್ತಿದ್ದು, ಪ್ರಸ್ತುತ ಲಭ್ಯವಿರುವ ನೀರಿನಿಂದ ಕೇವಲ 20 ದಿನಗಳ ಕಾಲ ಮಾತ್ರ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಲ್ಲಿನ ನೀರು ತಳ ಸೇರುತ್ತಿದ್ದು, ಪ್ರಸ್ತುತ ಲಭ್ಯವಿರುವ ನೀರಿನಿಂದ ಕೇವಲ 20 ದಿನಗಳ ಕಾಲ ಮಾತ್ರ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳಲಾಗುತ್ತಿದೆ.

ಮುಂಗಾರು ಮಳೆ ಆರಂಭವಾಗಿ ಜಲಾನಯನ ಪ್ರದೇಶಗಳಲ್ಲಿ ನೀರು ಬಂದರೆ ಮಾತ್ರ ವಿದ್ಯುತ್ ಉತ್ಪಾದನೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಜಲಾಶಯದಲ್ಲಿ ಸೋಮವಾರದಂದು ನೀರಿನ ಮಟ್ಟ 1746.9 (ಪೂರ್ಣಮಟ್ಟ 1819) ಅಡಿಗೆ ತಲುಪಿದ್ದು, ಕೇವಲ 16 ಟಿಎಂಸಿ (ಶೇ.10.4) ನೀರಿರುವುದಾಗಿ ತಿಳಿದುಬಂದಿದೆ.

ಲಿಂಗನಮಕ್ಕಿ ಜಲಾಶಯದ ನೀರನ್ನು ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರ, ಲಿಂಗನಮಕ್ಕಿ ಪವರ್‌ಹೌಸ್, ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಮತ್ತು ಗೇರುಸೊಪ್ಪಾ ಕೇಂದ್ರಗಳಲ್ಲಿ ನಾಲ್ಕು ವಿಭಿನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತದೆ.

ನೀರಿನ ಮಟ್ಟ 1743 ಅಡಿಗಿಂತ ಕೆಳಗಿಳಿದರೆ ಲಿಂಗನಮಕ್ಕಿ ವಿದ್ಯುದಾಗಾರಕ್ಕೆ ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ. ಅದೇ ರೀತಿಯಲ್ಲಿ 1724 ಅಡಿಗೆ ತಲುಪಿದಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಜಲವಿದ್ಯುತ್‌ ಉತ್ಪಾದಿಸುವ ಶರಾವತಿ ವಿದ್ಯುದಾಗಾರಕ್ಕೆ ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.

ಸೋಮವಾಲದವರೆಗೆ ಜಲಾಶಯದಲ್ಲಿ ಕೇವಲ 16 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದ್ದು, ಲಭ್ಯವಿರುವ ನೀರಿನಿಂದ 285 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಬಹುದು ಎಂದು ಮೂಲಗಳು ತಿಳಿಸಿವೆ.

ಲಿಂಗನಮಕ್ಕಿ ಪವರ್‌ಹೌಸ್ ಒಂದರಿಂದಲೇ 9 ಮಿಲಿಯನ್ ಯೂನಿಟ್ ಕೊಡುಗೆಯೊಂದಿಗೆ ನಾಲ್ಕು ವಿದ್ಯುತ್ ಕೇಂದ್ರಗಳಿಂದ ಪ್ರತಿನಿತ್ಯ 12 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಜಲಾಶಯದಲ್ಲಿ ನೀರು ತಳ ಸೇರುತ್ತಿರುವ ಹಿನ್ನೆಲೆಯಲ್ಲಿ ಹಿನ್ನೀರು ಪ್ರದೇಶದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಹಸಿರುಮಕ್ಕಿ ಮುಪ್ಪಾನೆ ಲಾಂಚ್ ವಾರದ ಹಿಂದೆ ಸ್ಥಗಿತಗೊಂಡಿದ್ದು, ಅದೇ ರೀತಿ ಹಸಿರುಮಕ್ಕಿ ಲಾಂಚ್ ಭಾನುವಾರ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಭಾಗದ ಹಲವು ಹಳ್ಳಿಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ.

ಇನ್ನು 10 ದಿನ ಕಳೆದಲ್ಲಿ ಸಿಗಂದೂರು ಲಾಂಚ್‌ನಲ್ಲೂ ವಾಹನಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ವಾಹನಗಳ ಸಂಚಾರಕ್ಕೆ ಇರುವ ಸಿಮೆಂಟ್‌ ಪ್ಲಾಟ್‌ಫಾಮ್‌ರ್‍ನಿಂದ ನೀರು ಕೆಳಗೆ ಇಳಿದಲ್ಲಿ ವಾಹನಗಳು ಲಾಂಚ್‌ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆನಂತರದಲ್ಲಿ ಜನರ ಸಂಚಾರ ಮಾತ್ರ ಇರಲಿದೆ. ಮಳೆ ಆರಂಭವಾಗಿ ನೀರಿನ ಮಟ್ಟ ಏರಿಕೆ ಆಗುವವರೆಗೆ ಜನರು ಕಾಯಬೇಕಾದ ಪರಿಸ್ಥಿತಿ ಎದುರಾಗಲಿದೆ.

ಈ ನಡುವೆ ಕೇರಳ ರಾಜ್ಯಕ್ಕೆ ಮುಂಗಾರು ಇನ್ನು ಪ್ರವೇಶಿಸಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ 8-10 ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಆಗ ಮಾತ್ರ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com