
ಬೆಂಗಳೂರು: ತುಮಕೂರು ಜಿಲ್ಲೆಯ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಮಂಗಳವಾರ ಬೆಂಗಳೂರಿನ ಗಿರಿನಗರದಲ್ಲಿ ಆಕೆಯ ಗೆಳೆಯ ಮತ್ತು ಆತನ ಸ್ನೇಹಿತ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಸಂತ್ರಸ್ತೆಯನ್ನು ಕಾನೂನು ವಿಧಿವಿಧಾನ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದಾಗ, ಆಕೆ ಮದ್ಯದ ಅಮಲಿನಲ್ಲಿದ್ದಳು. ಆದರೆ, ಆರೋಪಿಗಳೇ ಆಕೆಗೆ ಬಲವಂತವಾಗಿ ಕುಡಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಅಮಲೇರಿದ ಸ್ಥಿತಿಯಲ್ಲಿದ್ದ ಆಕೆ, ತನ್ನ ಗೆಳೆಯನೊಂದಿಗೆ ತಕ್ಷಣವೇ ಮದುವೆ ಮಾಡಿಸುವಂತೆ ಪೊಲೀಸರನ್ನು ಕೇಳಿಕೊಂಡಿದ್ದಾಳೆ. ಪ್ರಜ್ಞೆ ಬಂದಾಗ ತನ್ನ ದೂರನ್ನು ಹಿಂಪಡೆಯಲು ಬಯಸಿದ್ದಳು. ಆದರೆ, ಈಗಾಗಲೇ ಎಫ್‌ಐಆರ್ ದಾಖಲಾಗಿರುವುದರಿಂದ, ಪ್ರಕರಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಸಂತ್ರಸ್ತೆಯ ಗೆಳೆಯ ಪುರುಷೋತ್ತಮ್ (22) ಮತ್ತು ಬ್ಯಾಂಕ್‌ನಲ್ಲಿ ಸೇಲ್ಸ್ ಪ್ರತಿನಿಧಿಯಾಗಿರುವ ಪುರುಷೋತ್ತಮ್ ಅವರ ಸ್ನೇಹಿತ ಚೇತನ್ (23) ಬಂಧಿತರು.
ಸಂತ್ರಸ್ತೆಯು ಮಂಗಳವಾರ ಪುರುಷೋತ್ತಮ್ ಅವರನ್ನು ಭೇಟಿಯಾಗಲು ನಗರಕ್ಕೆ ಬಂದಿದ್ದರು. ಇಬ್ಬರೂ ಗಿರಿನಗರದ ಈರಣ್ಣ ಗುಡ್ಡೆಯಲ್ಲಿರುವ ಚೇತನ್‌ನ ಕೊಠಡಿಗೆ ತೆರಳಿದ್ದರು.
ರಾತ್ರಿ ಕೊಠಡಿಯಿಂದ ಸಂತ್ರಸ್ತೆಯ ಕಿರುಚಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಆಕೆಯನ್ನು ಗಿರಿನಗರ ಠಾಣೆಗೆ ಕರೆದೊಯ್ಯಲಾಗಿತ್ತು. ಘಟನೆ ವೇಳೆ ತಾನು ಕೊಠಡಿಯಲ್ಲಿ ಇರಲಿಲ್ಲ ಎಂದು ಚೇತನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನ ಕೊಠಡಿಯಲ್ಲಿಯೇ ಅತ್ಯಾಚಾರ ನಡೆದಿದ್ದರಿಂದ ಪೊಲೀಸರು ಆತನನ್ನೂ ಬಂಧಿಸಿದ್ದಾರೆ.
ಈಮಧ್ಯೆ, ಪುರುಷೋತ್ತಮ್ ಇದು ಒಮ್ಮತದ ಲೈಂಗಿಕ ಕ್ರಿಯೆ ಎಂದಿದ್ದು, ಕೊಠಡಿಯಲ್ಲಿ ಪೊಲೀಸರಿಗೆ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಯುವತಿ ತನ್ನ ಸ್ವಂತ ಇಚ್ಛೆಯಿಂದ ನಗರಕ್ಕೆ ಬಂದಿದ್ದಾಳೆಯೇ ಅಥವಾ ಆಕೆಯ ಪ್ರಿಯಕರನ ಬೇಡಿಕೆಯ ಮೇರೆಗೆ ನಗರಕ್ಕೆ ಬಂದಿದ್ದಾಳೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇಬ್ಬರು ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement