ಐಪಿಎಸ್ ಅಧಿಕಾರಿ ಸೋಗಿನಲ್ಲಿ ಹಲವರಿಗೆ ವಂಚನೆ; 45 ವರ್ಷದ ವ್ಯಕ್ತಿ ಬಂಧನ

ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ಮತ್ತು ಹಲವಾರು ಪೊಲೀಸರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಕಾಟನ್‌ಪೇಟೆ ಪೊಲೀಸರು 45 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ಮತ್ತು ಹಲವಾರು ಪೊಲೀಸರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಕಾಟನ್‌ಪೇಟೆ ಪೊಲೀಸರು 45 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಬನಶಂಕರಿ ನಿವಾಸಿಯಾದ ವಿಶುಕುಮಾರ್ ಅಲಿಯಾಸ್ ಅರ್ಜುನ್ ಎಂದು ಗುರುತಿಸಲಾಗಿದೆ. ಫೈನಾನ್ಸ್ ಸಂಸ್ಥೆ ನಡೆಸುತ್ತಿರುವ ರಾಘವೇಂದ್ರ ಎಸ್ ಎಂಬುವವರು ಕಳೆದ ವರ್ಷ ನವೆಂಬರ್‌ನಲ್ಲಿ ತಮ್ಮ ಸ್ನೇಹಿತನ ಮೂಲಕ ವಿಶುಕುಮಾರ್‌ನ ಸಂಪರ್ಕಕ್ಕೆ ಬಂದಿದ್ದಾಗಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ತಾನು ಕೇಂದ್ರೀಯ ಅಪರಾಧ ವಿಭಾಗದಲ್ಲಿ (ಸಿಸಿಬಿ) ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿವೈಎಸ್ಪಿ) ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದು, ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ಮಾತನಾಡುತ್ತಿದ್ದರು ಮತ್ತು ದೂರುದಾರರ ನಂಬಿಕೆಯನ್ನು ಗಳಿಸಲು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾಗಿ ಆರೋಪಿಸಿದ್ದಾರೆ.

ಕೆಲವು ದಿನಗಳ ನಂತರ, ಆರೋಪಿಯು ತನಗೆ ವಿವಾಹ ನಿಶ್ಚಯವಾಗಿದ್ದು, 25 ಲಕ್ಷ ರೂ. ಗಳನ್ನು ಹೊಂದಿಸುವಂತೆ ಮನವಿ ಮಾಡಿದ್ದಾನೆ ಮತ್ತು ಮೂರು ತಿಂಗಳಲ್ಲಿ ಬಡ್ಡಿಯೊಂದಿಗೆ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾನೆ. ಇದನ್ನು ನಂಬಿದ ರಾಘವೇಂದ್ರ ಸಿಸಿಬಿ ಕಚೇರಿ ಹಿಂಭಾಗದಲ್ಲಿರುವ ವಿಶುಕುಮಾರ್‌ಗೆ ಹೆಚ್ಚುವರಿಯಾಗಿ 5 ಲಕ್ಷ ರೂ. ಸೇರಿದಂತೆ 25 ಲಕ್ಷ ರೂ. ಸಾಲ ನೀಡಿದ್ದಾರೆ.

ವಿಧಾನಸೌಧದ ಬಳಿಯ ಎಂಎಸ್ ಬಿಲ್ಡಿಂಗ್‌ನಲ್ಲಿರುವ ದೇವಸ್ಥಾನದಲ್ಲಿ ನಡೆದ ಮದುವೆಯಲ್ಲಿ ರಾಘವೇಂದ್ರ ಕೂಡ ಭಾಗವಹಿಸಿದ್ದರು. ನಂತರ, ಅವರು ಹಣವನ್ನು ಹಿಂದಿರುಗಿಸುವಂತೆ ವಿನಂತಿಸಿದಾಗ, ವಿಶುಕುಮಾರ್ ಆ ವಿಷಯದಿಂದ ತಪ್ಪಿಸಿಕೊಳ್ಳುತ್ತಿದ್ದ ಮತ್ತು ಕ್ರಮೇಣ ದೂರುದಾರರಿಂದ ತಪ್ಪಿಸಿಕೊಂಡು ತಿರುಗಲು ಪ್ರಾರಂಭಿಸಿದನು. ಪೊಲೀಸರಿಗೆ ದೂರು ನೀಡುವುದಾಗಿ ರಾಘವೇಂದ್ರ ಹೇಳಿದಾಗ, ವಿಶುಕುಮಾರ್ ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ರಾಘವೇಂದ್ರ ಅವರು ತಮ್ಮ ಸ್ನೇಹಿತರ ಬಳಿ ವಿಚಾರಿಸಿದ್ದಾರೆ. ಆಗ ವಿಶುಕುಮಾರ್ ವಂಚಕ ಮತ್ತು ತಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಹಲವರಿಗೆ ವಂಚಿಸಿರುವುದು ತಿಳಿದುಬಂದಿದೆ. ಈ ಸಂಬಂಧ ಅವರು ಶುಕ್ರವಾರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ವಿಶುಕುಮಾರ್ ತನ್ನ ಫೋನ್ ಸಂಖ್ಯೆಯನ್ನು 'ಅರ್ಜುನ್ ಐಪಿಎಸ್' ಎಂದು ಕಾಲರ್ ಐಡೆಂಟಿಫಿಕೇಷನ್ ಅಪ್ಲಿಕೇಶನ್‌ನಲ್ಲಿ ಸೇವ್ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆತ ಹಲವಾರು ಕಾನ್‌ಸ್ಟೆಬಲ್‌ಗಳಿಗೆ ಅವರ ಆಯ್ಕೆಯ ಪೋಸ್ಟಿಂಗ್ ಭರವಸೆ ನೀಡುವ ಮೂಲಕ ಹಣ ವಸೂಲಿ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com