ಗೃಹಜ್ಯೋತಿ ಯೋಜನೆ ಜಾರಿ ಹೊರೆ ಗ್ರಾಹಕರ ಮೇಲೆ ಹೇರುವುದಿಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ಗೃಹಜ್ಯೋತಿ ಯೋಜನೆ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹೇರುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಚಿವ ಕೆ.ಜೆ.ಜಾರ್ಜ್.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಚಿವ ಕೆ.ಜೆ.ಜಾರ್ಜ್.

ಬೆಂಗಳೂರು: ಗೃಹಜ್ಯೋತಿ ಯೋಜನೆ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹೇರುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಸಚಿವರು, ಹಿಂದಿನ ಸರ್ಕಾರದ ವಿದ್ಯುತ್ ದರ ಏರಿಕೆ ಆದೇಶ ಇದೀಗ ಜಾರಿಯಾಗಿದೆ. ಕೆಇಆರ್​ಸಿ ಒಮ್ಮೆ ಆದೇಶ ಮಾಡಿದರೆ ಹಿಂಪಡೆಯಲು ಆಗುವುದಿಲ್ಲ ಎಂದು ಹೇಳಿದರು. ಅಲ್ಲದೆ, ಗೃಹಜ್ಯೋತಿ ಯೋಜನೆ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಇಆರ್​ಸಿ ಕಾಯ್ದೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ವಿದ್ಯುತ್ ಏರಿಕೆ ವಿಚಾರವನ್ನು ಕೇವಲ ಅಧಿಕಾರಿಗಳು ನಿರ್ಧರಿಸುವುದಿಲ್ಲ. ಸಿಎಂ, ಇಂಧನ ಇಲಾಖೆ ಸಚಿವರು ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತಾರೆ. ನಾವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಕೆಇಆರ್​ಸಿ ಮೇಲೆ ಹಾಕಲ್ಲ. ಹಿಂದಿನ ಬಿಲ್ ಪಾವತಿಸಲು ಗ್ರಾಹಕರಿಗೆ 3 ತಿಂಗಳ ಕಾಲಾವಕಾಶವಿದೆ ಎಂದು ಹೇಳಿದರು.

ಹೊಸತಾಗಿ ಮನೆ ನಿರ್ಮಾಣ ಮತ್ತು ಮನೆ ಬದಲಾವಣೆ ವಿಚಾರವಾಗಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಚರ್ಚೆಯಾಗಿದೆ. ಅಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯ ಜೊತೆಗೂ ಚರ್ಚೆ ಮಾಡಲಾಗಿದೆ.

ಹೊಸತಾಗಿ ಮನೆ ನಿರ್ಮಾಣ ಮಾಡಿದವರಿಗೆ 58 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಯಾರು ಹೊಸದಾಗಿ ಮನೆಗೆ ಬರುತ್ತಾರೆ ಅವರಿಗೆ ದಾಖಲೆ ಇರುವುದಿಲ್ಲ. ಅವರಿಗೆ ಸರಾಸರಿ 53 +10 ಶೇ ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದರು.

58 ಯೂನಿಟ್ ವರೆಗೂ ವಿದ್ಯುತ್ ಉಚಿತ ಆಗಲಿದೆ. ಹೊಸ ಮನೆಯವರಿಗೆ ಕೂಡ ಇದೇ ಯೂನಿಟ್ ಅನ್ವಯ ಆಗಲಿದೆ. ವಿದ್ಯುತ್ ಬಳಕೆ ಕುರಿತಾಗಿ ಒಂದು ವರ್ಷದವರೆಗೂ ಲೆಕ್ಕಾಚಾರ ಪಡೆದುಕೊಳ್ಳಲು ಆಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ರಾಜ್ಯದಲ್ಲಿ ಮಳೆ ಕೊರತೆ ಆಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮಳೆ ಪೂರ್ಣ ಪ್ರಮಾಣದಲ್ಲಿ ಸುರಿಯಲು ಇನ್ನೂ ಸಮಯ ಇದೆ ಎಂದರು.

ರಾಜ್ಯದಲ್ಲಿ ಸೋಲಾರ್ ಮತ್ತು ವಿಂಡ್ ಎನರ್ಜಿ ಬಳಕೆ ಆಗುತ್ತಿದೆ. ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಆಗಸ್ಟ್ ವರೆಗೂ ಮಳೆ ಬರುವ ನಿರೀಕ್ಷೆ ಇದೆ. ದೇವರ ಮೇಲೆ ಭಾರ ಹಾಕಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com