

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ವಿಳಂಬ ಮತ್ತು ಪೂರ್ವ ಮಾನ್ಸೂನ್ ಮಳೆಯ ಕೊರತೆಯಿಂದಾಗಿ, ಹೆಚ್ಚಿನ ಅಣೆಕಟ್ಟುಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟವು ತೀವ್ರವಾಗಿ ಕುಸಿದಿದೆ. ಮುಂದಿನ 10 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿದರೆ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ರಾಜ್ಯಾದ್ಯಂತ ಬಿತ್ತನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಪರಿಶೀಲನಾ ಸಭೆ ನಡೆಸಿದರು. ಜೂನ್ 1ರಿಂದ 11ರವರೆಗಿನ ಮಾಹಿತಿ ಪ್ರಕಾರ ಶೇ.67ರಷ್ಟು ಮಳೆ ಕೊರತೆಯಿದೆ. ಕೆಲ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವುದು ಸರಕಾರದ ಗಮನಕ್ಕೆ ಬಂದಿದೆ.
KSNDMC ಅಂಕಿಅಂಶಗಳ ಪ್ರಕಾರ, ನೀರು 13 ಜಲಾಶಯಗಳಲ್ಲಿ 166 ಟಿಎಂಸಿ ನೀರು ಲಭ್ಯವಿದ್ದು, ಅವುಗಳ ಒಟ್ಟು ಸಾಮರ್ಥ್ಯದ 865 ಟಿಎಂಸಿ ಅಡಿಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಪರಿಸ್ಥಿತಿ ಭೀಕರವಾಗಿದೆ ಎಂದು ಹೇಳಲಾಗಿದೆ.
2022ರಲ್ಲಿ ಕೃಷ್ಣರಾಜ ಸಾಗರ, ಹಾರಂಗಿ, ಹೇಮಾವತಿ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ 64.51 ಟಿಎಂಸಿ ಅಡಿ ನೀರು ಇತ್ತು. ಜೂನ್ 9 ರಂದು ಈ ಅಣೆಕಟ್ಟುಗಳು ಕೇವಲ 33.73 ಟಿಎಂಸಿ ಅಡಿಗಳನ್ನು ಹೊಂದಿದ್ದವು. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಪರಿಸ್ಥಿತಿ ಹೆಚ್ಚು ಹದಗೆಟ್ಟಿದೆ. ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ಕಳೆದ ವರ್ಷ ಈ ವೇಳೆಗೆ 170 ಟಿಎಂಸಿ ಅಡಿ ನೀರು ಇದ್ದು, ಈ ವರ್ಷ 78 ಟಿಎಂಸಿ ಅಡಿ ನೀರು ಇದೆ.
ಮಲೆನಾಡು ಮತ್ತು ಕೊಡಗು ಭಾಗಗಳಲ್ಲಿ ಕೂಡ ಮುಂಗಾರು ಪೂರ್ವ ಮಳೆ ಕೊರತೆ ದಾಖಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಮೋಡಗಳು ದುರ್ಬಲವಾಗಿ ಕಾಣುತ್ತಿವೆ ಹೀಗಾಗಿ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ.
ಒಂದು ವಾರ ಅಥವಾ ಇನ್ನೂ 10 ದಿನ ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಇದು ಕೃಷಿಯ ಮೇಲೂ ಪರಿಣಾಮ ಬೀರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ 9 ರಂದು 13 ಪ್ರಮುಖ ಅಣೆಕಟ್ಟುಗಳಲ್ಲಿ 166 ಟಿಎಂಸಿ ಅಡಿ ನೀರು ಇದ್ದು, ಕಳೆದ ವರ್ಷ 277 ಟಿಎಂಸಿ ಅಡಿ ನೀರು ಇತ್ತು. ಏಕೆಂದರೆ 2021ರಲ್ಲಿ ಡಿಸೆಂಬರ್‌ವರೆಗೆ ಉತ್ತಮ ಮಳೆಯಾಗಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
ಬಿಪರ್‌ಜೋಯ್ ಮಳೆ ಮೋಡಗಳನ್ನು ಗುಜರಾತ್‌ಗೆ ಎಳೆದೊಯ್ದಿದೆ ಎಂದು ಕೃಷಿ ಹವಾಮಾನ ತಜ್ಞ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ ಪ್ರೊ.ಎಂ.ಬಿ.ರಾಜೇಗೌಡ ಹೇಳಿದ್ದಾರೆ. ಬೀದರ್, ಬೆಳಗಾವಿ, ಚಾಮರಾಜನಗರ, ಮೈಸೂರು, ಯಾದಗಿರಿ, ಕಲಬುರಗಿ ಭಾಗಗಳಲ್ಲಿ ಬೆಳೆದ ಬೆಳೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.